

ಕೂಡ್ಲಿಗಿ: ಸಿದ್ಧ ಆಹಾರ, ಎಣ್ಣೆ ಪದಾರ್ಥಗಳು ಹಾಗೂ ಸತ್ವರಹಿತ ತಿನಿಸು ಸೇವಿಸಿದಲ್ಲಿ ಆರೋಗ್ಯ ಹದಗೆಡುತ್ತದೆ ಎಂದು ಟಿಎಚ್‌ಒ ಡಾ.ಎಸ್.ಪಿ.ಪ್ರದೀಪ್ ಹೇಳಿದರು.
ಇದನ್ನೂ ಓದಿ:ಪೋಷಣ ಅಭಿಯಾನ, ಪೌಷ್ಟಿಕ ಆಹಾರ ಶಿಬಿರ
ಪಟ್ಟಣದ ಹೊಸಪೇಟೆ ರಸ್ತೆಯ ನಮ್ಮ ಕ್ಲಿನಿಕ್‌ನಲ್ಲಿ ತಿಮ್ಮಲಾಪುರ ಸಮುದಾಯ ಆರೋಗ್ಯ ಕೇಂದ್ರದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪೌಷ್ಟಿಕ ಆಹಾರ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳು ಕೇಳಿದರೆಂದು ಹಿಂದೆ-ಮುಂದೆ ಯೋಚಿಸದೆ ತಿನಿಸು ಕೊಡಿಸುತ್ತಿರುವ ಪರಿಣಾಮ ಅಪೌಷ್ಟಿಕತೆ ಉದ್ಭವಿಸುತ್ತಿದೆ. ನಾವು ತಿನ್ನುವ ಆಹಾರ ಎಷ್ಟು ಪೌಷ್ಟಿಕವಾಗಿದೆ ಅಥವಾ ಮಕ್ಕಳಿಗೆ ಕೊಡಿಸುತ್ತಿರುವ ತಿನಿಸು ಅವರ ಆರೋಗ್ಯಕ್ಕೆ ಪೂರಕವೇ ಎನ್ನುವ ಬಗ್ಗೆ ಯೋಚಿಸುವುದಿಲ್ಲ. ನಿರ್ಲಕ್ಷ್ಯದ ಫಲವಾಗಿ ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಮಧುಮೇಹ ಸಮಸ್ಯೆಗಳು ಆವರಿಸಿವೆ. ವಿಶೇಷವಾಗಿ ನಗರವಾಸಿಗಳು ನಿಶ್ಯಕ್ತಿ, ಆಯಾಸದಂಥ ತೊಂದರೆಗಳನ್ನು ಎದುರಿಸುತ್ತಿರುವುದು ಅಪೌಷ್ಟಿಕತೆ ಕಾರಣದಿಂದಲೇ. ಸೊಪ್ಪು ಹಾಗೂ ಬೇಳೆಕಾಳು ಸೇರಿದಂತೆ ನಾರಿನಾಂಶ ಇರುವ ಆಹಾರ ಸೇವಿಸಬೇಕು. ಆಹಾರವನ್ನು ಚನ್ನಾಗಿ ಅಗೆದು ನಿಧಾನವಾಗಿ ತಿನ್ನಬೇಕು. ಆಗ ಪಚನ ಕ್ರಿಯೆ ಜತೆಗೆ ದೇಹದ ಜೀವರಾಸಾಯನಿಕ ಕ್ರಿಯೆ ಉತ್ತಮವಾಗುತ್ತದೆ ಎಂದರು.
ಶುಶ್ರೂತಾಧಿಕಾರಿ ಸಂಗಮೇಶ, ಕರಿ ಯಲ್ಲಪ್ಪ, ಆಶಾ ಕಾರ್ಯಕರ್ತೆಯರಾದ ಎ.ಎಂ. ಸಾವಿತ್ರಿ, ಪದ್ಮಾ, ಜ್ಯೋತಿ, ಉಮಾ, ಅಂಗನವಾಡಿ ಕಾರ್ಯಕರ್ತೆ ಬಿ.ಕಾಮಾಕ್ಷಿ ಇತರರಿದ್ದರು.