ಮಡಿಕೇರಿ: ಸಮಾಜದ ಆರೋಗ್ಯ ಕಾಪಾಡುವುದರಲ್ಲಿ ಪೌರಕಾರ್ಮಿಕರ ಪಾತ್ರ ದೊಡ್ಡದು. ಅವರ ಸೇವೆಯನ್ನು ನಿತ್ಯ ಸ್ಮರಿಸಬೇಕು ಎಂದು ಆರ್ಯವೈಶ್ಯ ಮಂಡಳಿಯ ಜಿಲ್ಲಾಧ್ಯಕ್ಷ ಬಿ.ಎಲ್.ಸತ್ಯನಾರಾಯಣ ಅಭಿಪ್ರಾಯಪಟ್ಟರು.
ಕುಶಾಲನಗರದ ಗಣರಾಜ್ಯೋತ್ಸವ ಅಂಗವಾಗಿ ಕುಶಾಲನಗರದ ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನ ಟ್ರಸ್ಟ್ ಮತ್ತು ವಾಸವಿ ಯುವತಿಯರ ಸಂಘದಿಂದ ನಾಲ್ಕು ಮಹಿಳಾ ಪೌರಕಾರ್ಮಿಕರಿಗೆ ಪುರಸಭೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಟ್ಟಣ ಸ್ವಚ್ಛತೆಯಿಂದ ಕೂಡಿದೆ ಎಂದರೆ ಪೌರಕಾರ್ಮಿಕರ ಕೊಡುಗೆಯೇ ಪ್ರಮುಖ. ಅಂತಹ ಶ್ರೇಷ್ಠ ಸೇವೆ ಸಲ್ಲಿಸುವವರನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಉದಯಕುಮಾರ್ ಮಾತನಾಡಿ, ನಿತ್ಯ ಜನ ಕಣ್ಣು ಬಿಡುವ ಮೊದಲೇ ಪಟ್ಟಣವನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆಯೂ ಗಮನಕೊಡಬೇಕು ಎಂದು ಸಲಹೆ ನೀಡಿದರು.
ಪುರಸಭೆ ಸದಸ್ಯ ಬಿ.ಅಮೃತ್ ಮಾತನಾಡಿ, ಯಾವುದೇ ಪ್ರಚಾರವಿಲ್ಲದೆ ನಿಶ್ಶಬ್ಧವಾಗಿ ತಮ್ಮ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರೇ ನಿಜವಾದ ನಾಯಕರು ಎಂದು ಶ್ಲಾಘಿಸಿದರು.
ಪುರಸಭೆ ಸದಸ್ಯರಾದ ಸುರೇಶ್, ಜಗದೀಶ್, ವಿ.ಎಸ್.ಆನಂದಕುಮಾರ್, ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಕವಿತಾ ಪ್ರವೀಣ್, ಕಾರ್ಯದರ್ಶಿ ಸ್ನೇಹಾ ನಿತಿನ್, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ್ ಇತರರು ಹಾಜರಿದ್ದರು.