ಹುದ್ದೆಯ ಘನತೆ ಹೆಚ್ಚಿಸಲು ಶ್ರಮಿಸಿ: ವೈದ್ಯರಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಲಹೆ

8CBP5
Published on

ಚಿಕ್ಕಬಳ್ಳಾಪುರ: ವೈದ್ಯರು ಗುಣಮಟ್ಟದ ಆರೋಗ್ಯ ಸೇವೆಯ ಮೂಲಕ ಪ್ರಾಮಾಣಿಕವಾಗಿ ಹುದ್ದೆಯ ಘನತೆ ಹೆಚ್ಚಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕರೆ ನೀಡಿದರು. ತಾಲೂಕಿನ ಮುದ್ದೇನಹಳ್ಳಿಯಲ್ಲಿ ಜಿಲ್ಲಾಡಳಿತ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆ ಕೈಗೊಂಡಿದ್ದ ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜಿನ ವೈದ್ಯಕೀಯ, ನರ್ಸಿಂಗ್ ಮತ್ತು ಅಲೈಡ್ ಸೈನ್ಸ್ ವಿದ್ಯಾರ್ಥಿಗಳ ಮೊದಲ ಬ್ಯಾಚ್‌ನ ಕಲಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇವರು ಎಲ್ಲೆಡೆ ಇರಲಾಗದು ಎಂಬ ಭಾವನೆಯಲ್ಲಿ ವೈದ್ಯರು ಮತ್ತು ವೈದ್ಯಕೀಯ ಸೇವಕರನ್ನು ಸೃಷ್ಟಿಸಿದ ಎಂಬ ಮಾತಿದೆ. ಜೀವ ಉಳಿಸುವ ಕೆಲಸವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ಹಿಂದೆ ಕರೊನಾ ತೀವ್ರ ಸಂಕಷ್ಟದ ಸಂದರ್ಭದಲ್ಲಿ ದೇವಸ್ಥಾನ, ಮಸೀದಿ, ಚರ್ಚ್, ವಿದ್ಯಾಸಂಸ್ಥೆ, ಶಾಪಿಂಗ್ ಕಾಂಪ್ಲೆಕ್ಸ್‌ಗಳು ಮುಚ್ಚಿದ್ದವು. ಆದರೆ, ಆಸ್ಪತ್ರೆಗಳು ಮಾತ್ರ ನಿರಂತರ ಸೇವೆಯ ಮೂಲಕ ಗಮನಸೆಳೆದವು ಎಂದರು.


ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ವ್ಯವಸ್ಥೆಯಲ್ಲಿ ವೈದ್ಯರ ಪ್ರಮಾಣ ಕೇವಲ ಶೇ.10 ಮತ್ತು ಶೇ.90 ನಸಿರ್ಂಗ್ ಸಿಬ್ಬಂದಿ ಇದ್ದಾರೆ. ಆರೋಗ್ಯ ಸೇವಕರಲ್ಲಿ ಮಮಕಾರ, ಅನುಕಂಪ, ದಯೆ ವಾತ್ಸಲ್ಯದ ಗುಣಗಳು ಇರಬೇಕು ಎಂದರು. ಶಾಸಕರ ಊರಿಗೆ ಹತ್ತಿರವಿರುವ ಹಿನ್ನೆಲೆಯಲ್ಲಿ ಅರೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಿಸಲಾಗುತ್ತಿದೆ ಎಂಬುದಾಗಿ ಹಲವರು ಹೇಳುತ್ತಿದ್ದಾರೆ. ಆದರೆ, ಸ್ವಾರ್ಥಕ್ಕಾಗಿ ಈ ಜಾಗ ಆಯ್ಕೆ ಮಾಡಿಲ್ಲ. ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಹತ್ತಿರ ಹಾಗೂ ಪ್ರಯಾಣಕ್ಕೆ ಅನುಕೂಲ ಇರುವ ಯೋಗ್ಯ ಪ್ರದೇಶ. ಆಂಧ್ರಪ್ರದೇಶ ಗಡಿ ಭಾಗದ ಜನರಿಗೂ ಅನುಕೂಲಕರ ಎಂದರು.


ಚಿಕ್ಕಬಳ್ಳಾಪುರದಿಂದ ಕನಕಪುರಕ್ಕೆ ವೈದ್ಯಕೀಯ ಕಾಲೇಜು ಸ್ಥಳಾಂತರಕ್ಕೆ ಯತ್ನಿಸಿದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲೆ ಒತ್ತಡ ಹೇರಿ, ಉಳಿಸಿಕೊಳ್ಳಲಾಯಿತು. ಇನ್ನು ಅಂದಿನ ಕ್ಯಾಬಿನೆಟ್‌ನ ಮೊದಲ ನಿರ್ಣಯವು ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿತ್ತು ಎಂದರು.ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನ ನಿರ್ಮಾಣ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಯಲು ಕ್ರಮ ಕೈಗೊಳ್ಳಲಾಗಿದೆ. ಜನವರಿಯಲ್ಲಿ ಕಾಲೇಜಿನ ಕಟ್ಟಡ ಉದ್ಘಾಟನೆ ನಿರೀಕ್ಷೆ ಇದೆ ಎಂದರು.

ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಬಿ.ಎಲ್.ಸುಜಾತ ರಾಥೋಡ್, ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ.ವಿ.ನಾಗರಾಜು, ಮುದ್ದೇನಹಳ್ಳಿ ಗ್ರಾಪಂ ಅಧ್ಯಕ್ಷ ಮುನಿನಾರಾಯಣಪ್ಪ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಸಿದ್ದಿಕ್ ಎಂ.ಅಹಮದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ಎಸ್.ಮಹೇಶ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಜಿ.ವಿ.ರಾಜಾರೆಡ್ಡಿ ಮತ್ತಿತರರು ಇದ್ದರು.

ಸರ್ಕಾರದ ಕಾಳಜಿಗೆ ನಿದರ್ಶನ: ಪ್ರಧಾನಿ ನರೇಂದ್ರ ಮೋದಿಯ ದೂರ ದೃಷ್ಟಿಯಿಂದ ದೇಶದಲ್ಲಿ ಯುಜಿ ಮತ್ತು ಪಿಜಿ ಸೇರಿ 75,000 ಇದ್ದ ಮೆಡಿಕಲ್ ಸೀಟ್‌ಗಳು ಇಂದು 1.5 ಲಕ್ಷಕ್ಕೆ ಏರಿಕೆಯಾಗಿವೆ. ಈ ಹಿಂದೆ ಒಂದೇ ಒಂದು ಏಮ್ಸ್ ಇತ್ತು. ಇದೀಗ 11 ಏಮ್ಸ್‌ಗಳಿವೆ. ಮೊದಲು 1,500 ಮಂದಿಗೆ ಒಬ್ಬ ವೈದ್ಯರು ಇದ್ದರು. ಆದರೆ, ಈಗ ಕರ್ನಾಟಕದಲ್ಲಿ 950 ಜನರಿಗೆ ಒಬ್ಬ ವೈದ್ಯರಿದ್ದಾರೆ. ಇದು ಜನರ ಆರೋಗ್ಯದ ಬಗೆಗಿನ ಸರ್ಕಾರದ ಕಾಳಜಿಗೆ ನಿದರ್ಶನ ಎಂದು ಸಚಿವರು ತಿಳಿಸಿದರು.

ಮೊದಲ ಬ್ಯಾಚ್ ಪ್ರಾರಂಭ: ರಾಜ್ಯದಲ್ಲಿ ಏಕಕಾಲದಲ್ಲಿ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಸೇರಿ 4 ವೈದ್ಯಕೀಯ ಕಾಲೇಜುಗಳನ್ನು ಸರ್ಕಾರ ಮಂಜೂರು ಮಾಡಿದೆ. ಇದಕ್ಕೆ ಕೇಂದ್ರ ಶೇ.60 ಮತ್ತು ರಾಜ್ಯ ಸರ್ಕಾರ ಶೇ.40 ಧನ ಸಹಾಯ ನೀಡಿದೆ. ಚಿಕ್ಕಬಳ್ಳಾಪುರದಲ್ಲಿ ಮೊದಲ ಬ್ಯಾಚ್ ಆರಂಭವಾಗಿದೆ.

ಪ್ರತಿಜ್ಞಾ ವಿಧಿ ಬೋಧನೆ: ಮುದ್ದೇನಹಳ್ಳಿಯ ವಿ.ಟಿ.ಯು ಕ್ಯಾಂಪಸ್‌ನಲ್ಲಿ ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಚಿಕ್ಕಬಳ್ಳಾಪುರ ನರ್ಸಿಂಗ್ ವಿಜ್ಞಾನಗಳ ಸಂಸ್ಥೆ ಹಾಗೂ ಚಿಕ್ಕಬಳ್ಳಾಪುರ ಅಲೈಡ್ ಹೆಲ್ತ್ ಸೈನ್ಸಸ್ ಸಂಸ್ಥೆಯನ್ನು ಉದ್ಘಾಟಿಸಲಾಯಿತು. ವೈದ್ಯಕೀಯ ವಿಜ್ಞಾನ ಸಂಸ್ಥೆಯ ಎಂಬಿಬಿಎಸ್ ಮೊದಲ ಬ್ಯಾಚ್‌ನ ವೈದ್ಯಕೀಯ ವಿದ್ಯಾರ್ಥಿಗಳಿಗೆ ವೈಟ್ ಕೋಟ್ ವಿತರಿಸಲಾಯಿತು. ವೃತ್ತಿ ಧರ್ಮದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಭಾವುಕರಾದ ಸಚಿವರು: ತಾಯಿ ಶಾಂತಾಗೆ ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ಸೂಕ್ತ ವೈದ್ಯಕೀಯ ವ್ಯವಸ್ಥೆ ಇಲ್ಲದೆ ಅನುಭವಿಸಿದ ನೋವಿನ ಬಗ್ಗೆ ಸಚಿವರು ಹೇಳಿಕೊಂಡು ಭಾವುಕರಾದರು. ದ್ವಿತೀಯ ಪಿಯುಸಿ ಬಳಿಕ ಊರಿನಲ್ಲಿಯೇ ವೈದ್ಯಕೀಯ ಶಿಕ್ಷಣ ಪಡೆಯಲು ಇಷ್ಟಪಟ್ಟಾಗ ಮತ್ತು ತಾಯಿಯನ್ನು ಕಳೆದುಕೊಂಡಾಗ ಜಿಲ್ಲೆಗೆ ಮೆಡಿಕಲ್ ಕಾಲೇಜು ಏಕೆ ಅನಿವಾರ್ಯ ಎಂಬುದು ಅರಿವಿಗೆ ಬಂತು. ಹಳ್ಳಿಯಲ್ಲಿದ್ದ ಅಮ್ಮನಿಗೆ ಆರೋಗ್ಯ ಸಮಸ್ಯೆಯಾದಾಗ ಹತ್ತಿರದಲ್ಲಿ ವೈದ್ಯಕೀಯ ಕಾಲೇಜು, ಸೂಕ್ತ ವೈದ್ಯಕೀಯ ವ್ಯವಸ್ಥೆ ಇಲ್ಲದೆ ಕಳೆದುಕೊಳ್ಳಬೇಕಾಯಿತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net