ಯೋಗೋತ್ಸವಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ; ಯೋಗ ಅಳವಡಿಸಿಕೊಳ್ಳಲು ಕರೆ

Yoga
Published on

ಬೆಂಗಳೂರು: ಭಾರತ ದೇಶದಲ್ಲಿ 140 ಕೋಟಿ ಜನಸಂಖ್ಯೆ ಇದ್ದು, ಅತ್ಯಂತ ದೊಡ್ಡದಾದ ಈ ಮಾನವ ಸಂಪನ್ಮೂಲದ ಸದ್ಭಳಕೆ ಮಾಡಿಕೊಳ್ಳಲು ಯೋಗ ಉತ್ತಮ ಮಾರ್ಗ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅಭಿಪ್ರಾಯಿಸಿದ್ದಾರೆ. ಯೋಗ ದಿನಾಚರಣೆ ಅಂಗವಾಗಿ ರಾಜ್ಯ ಆಯುಷ್ ಇಲಾಖೆ ಹಮ್ಮಿಕೊಂಡಿರುವ ‘ಯೋಗೋತ್ಸವ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬದಲಾದ ಜೀವನಶೈಲಿಯಿಂದ ಯುವಜನತೆಯ ಆಹಾರ-ವಿಹಾರ ಬದಲಾಗಿದೆ. ಇದರಿಂದ ಚಿಕ್ಕ ವಯಸ್ಸಿನಲ್ಲೇ ಬಿಪಿ, ಶುಗರ್, ಬೊಜ್ಜು ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಈ ಸಮಸ್ಯೆಗಳಿಗೆ ನಿಯಮಿತವಾದ ಯೋಗಾಭ್ಯಾಸ ಪರಿಹಾರವಾಗಿದೆ. ಯೋಗ, ಆಯುರ್ವೇದದಂತಹ ಪಾರಂಪರಿಕ ವಿದ್ಯೆಗಳು ಜಗತ್ತಿಗೆ ಭಾರತ ನೀಡಿದ ಬಹುದೊಡ್ಡ ಕೊಡುಗೆ. ಹಲವು ದಶಕಗಳ ಹಿಂದೆಯೇ ನಮ್ಮ ಅನೇಕ ಸಂತರು, ಯೋಗಿಗಳು ಜಗತ್ತಿನಾದ್ಯಂತ ಯೋಗವಿದ್ಯೆಯನ್ನು ಪ್ರಚಾರ ಮಾಡಿದ್ದಾರೆ. ಇಂತಹ ಯೋಗಕ್ಕೆ ಅಧಿಕೃತವಾಗಿ ವಿಶ್ವಮನ್ನಣೆ ದೊರೆತು 10 ವರ್ಷ ಆಗಿದೆ. ಇದೇ ಜೂ.21ರಂದು 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಇದ್ದು, ಅದರ ಅಂಗವಾಗಿ ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 10 ದಿನಗಳ ‘ಯೋಗೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಸಚಿವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಯೋಗೋತ್ಸವದ ಪೋಸ್ಟರ್ ಮತ್ತು ವೆಬ್‌ಸೈಟ್ ಬಿಡುಗಡೆಗೊಳಿಸಲಾಯಿತು. ಇದೇ ವೇಳೆ ಸುಮಾರು 400 ವರ್ಷಗಳ ಹಿಂದಿನ ತಾಳೆಗರಿಗಳಲ್ಲಿದ್ದ, ಆಯುರ್ವೇದಕ್ಕೆ ಸಂಬಂಧಪಟ್ಟ ಸಂಸ್ಕೃತ ಪದಗಳ ಡಿಕ್ಷನರಿಯನ್ನು ಆಯುಷ್ ಇಲಾಖೆ ಮತ್ತು ಟ್ರಾನ್ಸ್ ಡಿಸಿಪ್ಲಿನರಿ ವಿಶ್ವವಿದ್ಯಾಲಯ (ಟಿಡಿಯು) ಹೊರತಂದಿದ್ದು, 6500 ಪುಟಗಳ ಬೃಹತ್ ಮೂರು ಸಂಪುಟಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆ ಆಯುಕ್ತ ಡಾ.ಶ್ರೀನಿವಾಸುಲು, ಟಿಡಿಯು ಉಪಕುಲಪತಿ ದರ್ಶನ್ ಶಂಕರ್, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

10 ದಿನಗಳ ವಿವಿಧ ಕಾರ್ಯಕ್ರಮ

ಹತ್ತನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ 10 ದಿನಗಳ ಯೋಗೋತ್ಸವ ಕಾರ್ಯಕ್ರಮದ ಮೂಲಕ ರಾಜ್ಯದ ಲಕ್ಷಾಂತರ ಜನರನ್ನು ತಲುಪುವ ಗುರಿ ಹೊಂದಿರುವುದಾಗಿ ಆಯುಷ್ ಇಲಾಖೆ ಆಯುಕ್ತ ಡಾ.ಶ್ರೀನಿವಾಸುಲು ತಿಳಿಸಿದ್ದಾರೆ.

ಸರ್ಕಾರದ ವಿವಿಧ ಇಲಾಖೆಗಳು, ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆಯುರ್ವೇದದ ಮಹತ್ವ, ಯೋಗದ ಪ್ರಯೋಜನ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಆಕಾಶವಾಣಿ ಮತ್ತು ಟಿವಿ ಚಾನಲ್‌ಗಳ ಮೂಲಕ ಮಾಹಿತಿಯನ್ನು ನೀಡಲಾಗುತ್ತದೆ. ರಾಜ್ಯದ ವಿವಿಧೆಡೆಗಳಲ್ಲಿ ಯೋಗ ತರಬೇತಿ, ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗಿದೆ. ವಿಶೇಷವಾಗಿ ಶಾಲಾ ಕಾಲೇಜುಗಳ, ವಸತಿ ನಿಲಯಗಳ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತ್ಯೇಕ ಶಿಬಿರಗಳನ್ನು ಆಯೋಜಿಸಲಾಗಿದೆ.

ಹತ್ತು ಹಲವು ಸಂಘಸಂಸ್ಥೆಗಳ ಸಹಭಾಗಿತ್ವ

10ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನವನ್ನು ‘ಮಹಿಳಾ ಸಬಲೀಕರಣಕ್ಕಾಗಿ ಯೋಗ’ ಎಂಬ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿದ್ದು, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಎನ್‌ಸಿಸಿ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಯೋಗ ಗಂಗೋತ್ರಿ ಟ್ರಸ್ಟ್, ಸಂಯಮ ಟ್ರಸ್ಟ್ ಹಾಗೂ ಇನ್ನಿತರ ಖಾಸಗಿ ಯೋಗ ಸಂಸ್ಥೆಗಳು ಯೋಗೋತ್ಸವದಲ್ಲಿ ಪಾಲ್ಗೊಂಡಿವೆ.

ಬೆಂಗಳೂರು ಅಪಾರ್ಟ್‌ಮೆಂಟ್ ಅಸೋಸಿಯೇಷನ್, ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆ, ಜೈನ್ ಯುನಿರ್ವಸಿಟಿ, ಲೂಲು ಮಾಲ್, ಮಾಲ್ ಆಫ್ ಏಷ್ಯಾ ಸೇರಿದಂತೆ ವಿವಿಧ ಸಂಸ್ಥೆಗಳು ಯೋಗೋತ್ಸವದ ಉದ್ದೇಶವನ್ನು ಮುಟ್ಟಿಸಲು ಕಾರ್ಯಯೋಜನೆಗಳನ್ನು ರೂಪಿಸಿಕೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net