ಆರೋಗ್ಯವೇ ನಿಜವಾದ ಸಂಪತ್ತು

LAB
Published on

ನರಗುಂದ: ಸಮೀಪದ ಬೋಪಳಾಪೂರ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಬನ್ನಿ ಮಹಾಂಕಾಳಿ ಅಮ್ಮನವರಿಗೆ ಉಡಿ ತುಂಬುವುದು ಹಾಗೂ ಸಣ್ಣಕ್ಕಿ ಪರಿವಾರದವರಿಂದ ನಿರ್ಮಿಸಲಾದ ಚೈತನ್ಯ ಆಸ್ಪತ್ರೆಯಲ್ಲಿ ದಿನದ 24 ಗಂಟೆ ಕ್ಲಿನಿಕಲ್ ಲ್ಯಾಬ್ (ರಕ್ತ ತಪಾಸಣೆ), ಇಸಿಜಿ ಸೇವೆಗಳ ಉದ್ಘಾಟನೆ ಸಮಾರಂಭವನ್ನು ಭೈರನಹಟ್ಟಿ ಶಾಂತಲಿಂಗ ಶ್ರೀಗಳು ಇತ್ತೀಚೆಗೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಸಣ್ಣಕ್ಕಿ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ಶಿವಾನಂದ ಸಣ್ಣಕ್ಕಿ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಹೇಳಿದ ಮಾತಿನಂತೆ ಭಾರತದ ಭವಿಷ್ಯವು ಅದರ ಹಳ್ಳಿಗಳಲ್ಲಿದೆ ಮತ್ತು ಅದರ ಆರೋಗ್ಯವು ಸಹ ಎಂದು ಹೇಳಿರುವ ಸಂದೇಶ ಅನ್ವಯವಾಗುವಂತೆ ಎಲ್ಲರಿಗೂ ಉಚಿತ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಮನುಷ್ಯನಿಗೆ ಆರೋಗ್ಯವೇ ನಿಜವಾದ ಸಂಪತ್ತು. ಇದು ಶಿಕ್ಷಣದ ಜತೆಗೆ ದೀರ್ಘಕಾಲೀನ ಸುಸ್ಥಿರ ಅಭಿವೃದ್ಧಿಗೆ ಮೂಲ ಆಧಾರವಾಗಿದೆ. ಗ್ರಾಮಗಳ ಮೇಲಿನ ಒಲವು ಹೊಂದಿರುವ ಶಿವಾನಂದ ಸಣ್ಣಕ್ಕಿ ಅವರು ವಾಣಿಜ್ಯೋದ್ಯಮದಲ್ಲಿ ಅಪೂರ್ವ ಸಾಧನೆಗೈದು ಮರಳಿ ತಮ್ಮ ಗ್ರಾಮದ ವಿವಿಧ ಸುತ್ತಮುತ್ತಲಿನ ಜನರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದರು.

ಹುಬ್ಬಳ್ಳಿಯ ಡಾ. ವಿ.ಇ. ಗಡಗಿ ಮಾತನಾಡಿ, ಸಣ್ಣಕ್ಕಿ ಚಾರಿಟಬಲ್ ಟ್ರಸ್ಟ್‌ನ ಕಾರ್ಯವೈಖರಿ ಅಪರಿಮಿತವಾದದ್ದು ಎಂದು ಚೈತನ್ಯ ಆಸ್ಪತ್ರೆಯಲ್ಲಿ ಸಲ್ಲಿಸಿದ ತಮ್ಮ ಸೇವಾ ಅನುಭವಗಳನ್ನು ಸ್ಮರಿಸಿದರು.

ಸಮಾಜ ಸೇವಕ ಶಿವಾನಂದ ಸಣ್ಣಕ್ಕಿ, ಬಸವರಾಜ ಸಣ್ಣಕ್ಕಿ ಮಾತನಾಡಿ, ಚೈತನ್ಯ ಆಸ್ಪತ್ರೆ ಸಾರ್ವಜನಿಕರಿಗೆ ಸದಾ ಗುಣಮಟ್ಟದ ಆರೋಗ್ಯ ಸೇವೆ ನೀಡುವುದರಲ್ಲಿ ಮುಂಚೂಣಿಯಲ್ಲಿರುತ್ತದೆ. ಈಗ ರಿಯಾಯಿತಿ ದರದಲ್ಲಿ ಕ್ಲಿನಿಕಲ್ ಲ್ಯಾಬ್ (ರಕ್ತ ತಪಾಸಣೆ), ಇಸಿಜಿ ಸೇವೆಗಳನ್ನು ದಿನದ 24 ಗಂಟೆಗಳ ಕಾಲ ಪ್ರಾರಂಭಿಸಿದೆ, ಸಮಾಜದ ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಮಹಾಂತೇಶ ಸಾಲಿಮಠ ಮಾತನಾಡಿದರು.

ರೇಖಾ ಸಣ್ಣಕ್ಕಿ, ರವೀಂದ್ರ ಹಿರೇಮಠ, ಬಿ.ಎಸ್. ಸಾಲಿಮಠ, ನಿಜಲಿಂಗಪ್ಪ ಸಣ್ಣಕ್ಕಿ, ಡಾ.ರವಿಕಾಂತ ಎಸ್, ಡಾ.ಬಿ.ಎ. ಇಂಡಿ, ವಿನೋದ ಹೊಂಬಳ, ಸಂದೀಪ ಸಣ್ಣಕ್ಕಿ, ಲಿಂಗಬಸಪ್ಪ ಮರ್ಚನ್ನವರ, ಮಲ್ಲಪ್ಪ ಕನ್ಯಾಳ, ಗುರುಸಿದ್ಧಪ್ಪ ಹೊಂಬಳ, ಲಿಂಗಯ್ಯ ಸಾಲಿಮಠ, ಚಂದ್ರಗೌಡ ಪಾಟೀಲ, ಮಲ್ಲಿಕಾರ್ಜುನ ಜೋರಲ್, ಮಲ್ಲಿಕಾರ್ಜುನ ಹೊಂಬಳ, ಗ್ರಾಮಸ್ಥರು ಉಪಸ್ಥಿತರಿದ್ದರು. ಬಿ.ಎಸ್. ಸಾಲಿಮಠ ನಿರೂಪಿಸಿದರು. ಸಂದೀಪ ಸಣ್ಣಕ್ಕಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net