ಆರೋಗ್ಯವಂತರೇ ದೇಶದ ನಿಜವಾದ ಸಂಪತ್ತು, ಗ್ರಾಪಂ ಮಾಜಿ ಸದಸ್ಯೆ ಮುನಿರತ್ನಮುನಿರಾಜು ಅಭಿಪ್ರಾಯ

24 Nela ph 02 Posan Abhiyan
Published on

ನೆಲಮಂಗಲ: ಆರೋಗ್ಯವಂತ ಮಹಿಳೆಯರು ಮತ್ತು ಮಕ್ಕಳು ದೇಶದ ಸಂಪತ್ತು ಎಂದು ಗ್ರಾಪಂ ಮಾಜಿ ಸದಸ್ಯೆ ಮುನಿರತ್ನಮುನಿರಾಜು ಅಭಿಪ್ರಾಯಪಟ್ಟರು.

ತಾಲೂಕಿನ ಕುಲುಮೆಕೆಂಪಲಿಂಗನಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಆಯೋಜಿಸಿದ್ದ ಪೋಷಣ್ ಅಭಿಯಾನದಲ್ಲಿ ಮಾತನಾಡಿದರು.

ಪೌಷ್ಟಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಯ್ದುಕೊಳ್ಳಬಹುದಾಗಿದೆ. ಪ್ರತಿನಿತ್ಯ ಪ್ರೋಟೀನ್, ಕಬ್ಬಿಣ, ನಾರಿನಂಶ ಇರುವ ಸೊಪ್ಪು ತರಕಾರಿ, ಧಾನ್ಯಗಳನ್ನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳುವ ಜತೆಗೆ ಮಕ್ಕಳಿಗೂ ಅಭ್ಯಾಸ ಮಾಡಿದಲ್ಲಿ ರಕ್ತ ಹೀನತೆಯಂತಹ ಸಮಸ್ಯೆ ತಗ್ಗಿಸಬಹುದಾಗಿದೆ ಎಂದರು.

ಆರೋಗ್ಯಕರ ಸಲಹೆಗಳ ಪಾಲನೆ ಮಾಡಿದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಗು ಅಥವಾ ಗರ್ಭಿಣಿ ಸಹಜ ಸ್ಥಿತಿಗೆ ಮರಳಲು ಸಾಧ್ಯ. ಮಹಿಳೆಯರಿಗೆ ಸರ್ಕಾರ ನೀಡಿರುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಆಶಾಕಾರ್ಯಕರ್ತೆ ಟಿ.ಪಿ.ವೀಣಾ ಮಾತನಾಡಿ, ಪೌಷ್ಟಿಕ ಆಹಾರ ಕುರಿತಾಗಿ ಜನಜಾಗೃತಿಗೆ ಮುಂದಾಗಿರುವ ಕೇಂದ್ರ ಸರ್ಕಾರ ಸೆಪ್ಟಂಬರ್ ತಿಂಗಳನ್ನು ಪೌಷ್ಟಿಕ ಮಾಸವಾಗಿ ಆಚರಿಸುವಂತೆ ನಿರ್ದೇಶನ ನೀಡಿದೆ. ಫೋಷಣ್ ಅಭಿಯಾನದ ಹೆಸರಿನಲ್ಲಿ ಭಾರತದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಈ ಜನಾಂದೋಲನದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಅಂಗನವಾಡಿ ಶಿಕ್ಷಕಿ ಎ.ದಾಕ್ಷಾಯಣಮ್ಮ, ಆರ್.ಪಲ್ಲವಿ, ಸಹಾಯಕಿ ಗಂಗಮ್ಮ, ಆಶಾಕಾರ್ಯಕರ್ತೆ ಬೃಂದಾದೇವಿ, ಮಂಜಮ್ಮ, ಎಚ್.ಪವಿತ್ರಾ, ಕೆ.ಕೆಂಪಮ್ಮ, ಸಿ.ರೇಣುಕಾಂಬಾ, ಕೆ.ಲೀಲಾವತಿ, ಎಂ.ಗಂಗಮ್ಮ, ಸಿದ್ದಗಂಗಮ್ಮ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net