

ಜಮಖಂಡಿ: ಧರ್ಮ ಸಾಧನೆಗೆ ಶರೀರದ ಆರೋಗ್ಯ ಬಹಳ ಮುಖ್ಯ. ಧರ್ಮಕ್ಕೂ ಶರೀರಕ್ಕೂ ಅನ್ಯೋನ್ಯವಾದ ಸಂಬಂಧವಿದೆ ಎಂದು ಓಲೆಮಠದ ಡಾ. ಅಭಿನವ ಚೆನ್ನಬಸವ ಮಹಾಸ್ವಾಮಿಗಳು ಹೇಳಿದರು.
ಶ್ರಾವಣ ಮಾಸದ ನಿಮಿತ್ತ ನಗರದ ಓಲೆಮಠದ ಆಶ್ರಯದಲ್ಲಿ ಮಂಗಳವಾರ ಸಂಜೆ ಆರಂಭವಾಗಿರುವ ಬಸವ ಸಮಕಾಲೀನ ಶರಣರ ಚರಿತಾಮೃತ ಪ್ರವಚನ ಹಾಗೂ ಚಿಂತಕರ ಉಪನ್ಯಾಸ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿ ವಹಿಸಿ ಅವರು ಆಶೀರ್ವಚನ ನೀಡಿದರು.
ಹಿತ, ಮಿತವಾಗಿ ಹಾಗೂ ಋತುಮಾನಕ್ಕೆ ಅನುಗುಣವಾಗಿ ಸಾತ್ವಿಕ ಆಹಾರ ಸೇವಿಸಬೇಕು. ಶಾರೀರಿಕ ಆರೋಗ್ಯ ಕಾಪಾಡಿಕೊಳ್ಳಲು ಮನಸ್ಸಿನ ನಿಯಂತ್ರಣ ಅಗತ್ಯವಿದೆ. ಮನಸ್ಸಿನ ಚಂಚಲತೆ ತಡೆಯಲು ಧ್ಯಾನ ಮಾಡುವುದು ಬಹಳ ಮುಖ್ಯ ಎಂದರು.
ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಕೊರಳಲ್ಲಿ ಕಲ್ಲು, ಬದನೆಕಾಯಿ ಕಟ್ಟಿಕೊಂಡು ಅಣಕವಾಡಲು ಬಂದವರನ್ನು ಲಿಂಗಸ್ವರೂಪದವರಂತೆ ಬಸವಣ್ಣನವರು ಕಾಣುತ್ತಿದ್ದರು. ಮನೆಯಲ್ಲಿ ಕಳವು ಮಾಡಲು ಬಂದಿದ್ದ ಕಳ್ಳನನ್ನು ಕೂಡಲಸಂಗಮದೇವ ಎಂದು ಕರೆದಿದ್ದರು. ಹಾಗಾಗಿ ಬಸವಣ್ಣನವರ ಮನಸ್ಸಿನಲ್ಲಿ ವೈರತ್ವ ಮತ್ತು ಕೆಟ್ಟದ್ದಕ್ಕೆ ಸ್ಥಾನವೇ ಇರಲಿಲ್ಲ ಎಂದರು.
ಹೃದಯರೋಗ ತಜ್ಞ ಡಾ.ಎಚ್.ಜಿ. ದಡ್ಡಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜೀವನಶೈಲಿ ಬದಲಾಗಿದ್ದರಿಂದ ಆಧ್ಯಾತ್ಮಿಕತೆಯಿಂದ ದೂರ ಸರಿಯುತ್ತಿದ್ದೇವೆ. ಮನಸ್ಸಿನ ದೌರ್ಬಲ್ಯದಿಂದಲೇ ಶೇ.90ರಷ್ಟು ರೋಗಗಳು ತಗಲುತ್ತಿವೆ. ನಮ್ಮ ಬಹಳಷ್ಟು ಸಮಯ ಮತ್ತು ಹಣವನ್ನು ಶರೀರದ ಆರೋಗ್ಯಕ್ಕಾಗಿ ವ್ಯಯ ಮಾಡುತ್ತಿದ್ದೇವೆ. ಆದರೆ, ಮನಸ್ಸಿನ ಆರೋಗ್ಯಕ್ಕಾಗಿ ಏನನ್ನೂ ಮಾಡುತ್ತಿಲ್ಲ ಎಂದು ವಿಷಾದಿಸಿದರು.
ಶರಣೆ ಭಾರತಿ ಅಮ್ಮನವರು ಶ್ರಾವಣ ಮಾಸದ ಮಹತ್ವ ಕುರಿತು ಪ್ರವಚನ ನೀಡಿದರು. ಶಿಕ್ಷಕ ಪಿ.ಎಸ್. ಕಟ್ಟಿಮನಿ, ಮಲ್ಲಿಕಾರ್ಜುನ ನಾವಿ ಸಂಗೀತ ಸೇವೆ ಸಲ್ಲಿಸಿದರು. ಪ್ರಸಾದ ದಾಸೋಹ ಮಾಡಿದ ಮಲ್ಲಿಕಾರ್ಜುನ ಹೋಳಗಿ ಹಾಗೂ ಶಿವಾನಂದ ಕೊಣ್ಣೂರ ಅವರನ್ನು ಶ್ರೀಮಠದ ಪರವಾಗಿ ಸನ್ಮಾನಿಸಲಾಯಿತು.
ಶಿಕ್ಷಕಿ ಸರಿತಾ ಶಿರಗುಪ್ಪಿ ಪ್ರಾರ್ಥನೆಗೀತೆ ಹಾಡಿದರು. ಮುಖ್ಯ ಶಿಕ್ಷಕ ಶಂಕರ ಲಮಾಣಿ ಸ್ವಾಗತಿಸಿ, ನಿರೂಪಿಸಿದರು. ಪತ್ರಕರ್ತ ಶಿವಾನಂದ ಕೊಣ್ಣೂರ ವಂದಿಸಿದರು.