

ಹುಬ್ಬಳ್ಳಿ : ನಮ್ಮ ದೇಶದ ಭವಿಷ್ಯವಾದ ಇಂದಿನ ಮಕ್ಕಳ ಸರ್ವಾಗೀಣ ಅಭಿವೃದ್ಧಿಗಾಗಿ ಉನ್ನತ ಶಿಕ್ಷಣ ಸಂಸ್ಕಾರ ಹಾಗೂ ಸದೃಢ ಆರೋಗ್ಯ ಅಗತ್ಯವಾಗಿದೆ ಎಂದು ವಿದ್ಯಾವಿಕಾಸ ಪ್ರಕಲ್ಪ ಪ್ರಾಂತ ಸಮಿತಿಯ ಅಧ್ಯಕ್ಷೆ ಭಾರತಿ ನಂದಕುಮಾರ ಹೇಳಿದರು.
ಸೇವಾ ಭಾರತಿ ಟ್ರಸ್ಟ್ನ ರಜತ ಮಹೋತ್ಸವದ ಅಂಗವಾಗಿ ವಿದ್ಯಾವಿಕಾಸ ಪ್ರಕಲ್ಪದ ಉಚಿತ ಮನೆಪಾಠ ಮತ್ತು ಸಂಸ್ಕಾರ ಕೇಂದ್ರಗಳ ಮಕ್ಕಳು, ಪಾಲಕರು ಹಾಗೂ ಶಿಕ್ಷಕಿಯರಿಗೆ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತಾಡಿದರು.
ಮಕ್ಕಳು ದೇವರಿಗೆ ಸಮಾನ. ಮಕ್ಕಳಲ್ಲಿ ಹಣದ ವ್ಯಾಮೋಹಕ್ಕಿಂತ ಗುಣವಂತಿಕೆ, ನೀತಿವಂತಿಕೆ ಬೆಳೆಸಬೇಕು. ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯಾಗಿಸಬೇಕು ಎಂದು ಸಲಹೆ ನೀಡಿದರು.
ಸಮಿತಿಯ ಪ್ರಾಂತ ಕಾರ್ಯದರ್ಶಿ ರಾಚಯ್ಯಾ ವಾರಿಕಲ್ಮಠ ಮಾತನಾಡಿ, ಸೇವಾ ಭಾರತಿಯ ವಿವಿಧ ಪ್ರಕಲ್ಪಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಇನ್ನರ್ವ್ಹೀಲ್ ಮಿಡ್ಟೌನ್ ಅಧ್ಯಕ್ಷೆ ಶಿಲ್ಪಾ ಶೆಟ್ಟಿ, ಸೇವಾ ಭಾರತಿ ಟ್ರಸ್ಟಿನ ಕಾರ್ಯಕರ್ತರಾದ ರತ್ನಾ ಮಾತಾಜಿ, ಅನಿತಾ ಬಾಗಲಕೋಟ, ಗೋಪಾಲ ಮಗಜಿಕೊಂಡಿ, ಸುರೇಶ ಮೆಣಸಗಿ, ಮುರಗೇಶಪ್ಪ ಮಡಿವಾಳರ ಹಾಗೂ ಇತರರು ಉಪಸ್ಥಿತರಿದ್ದರು.
ಡಾ. ವರ್ಷಾ ಶೆಟ್ಟರ, ಡಾ. ತ್ರಿಶೂಲ ತಾಮ್ರಲ್, ಡಾ ಹರೀಶ ಬಡಿಗೇರ, ಡಾ. ಸನ್ನಿಧಿ ಹೆಗಡೆ, ಡಾ. ಶ್ರೀನಿಧಿ ಶೆಟ್ಟಿ ಅವರು ಆರೋಗ್ಯ ತಪಾಸಣೆ ಮಾಡಿ, ಸಲಹೆ ಸೂಚನೆ ನೀಡಿದರು.
ಒಟ್ಟು 189 ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ಜಯಶ್ರೀ ಮಾಯಕಾರ ಸ್ವಾಗತಿಸಿದರು. ಪೂಜಾ ಹೊಸಮನಿ ನಿರೂಪಿಸಿದರು. ಲೀಲಾವತಿ ಚನ್ನಪ್ಪಗೌಡರ ವಂದಿಸಿದರು.