ಮ್ಯಾಮ್ಕೋಸ್​ಗೆ 3.02 ಕೋಟಿ ರೂ. ನಿವ್ವಳ ಲಾಭ

web 3
Published on

ಕೊಪ್ಪ: ಮ್ಯಾಮ್ಕೋಸ್ 2019-20ನೇ ಸಾಲಿನಲ್ಲಿ 3.02 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆ ಉಪಾಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ ತಿಳಿಸಿದರು.

ಮ್ಯಾಮ್ಕೋಸ್ ಕೊಪ್ಪ ಶಾಖೆಯಲ್ಲಿ ಆರೋಗ್ಯ ವಿಮಾ ಯೋಜನೆ ಫಲಾನುಭವಿಗಳಿಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಅವರು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ 82 ವರ್ಷಗಳಿಂದ ಅಡಕೆ ವ್ಯಾಪಾರ ನಡೆಸುತ್ತಿರುವ ಸಂಸ್ಥೆ 11 ಶಾಖೆಗಳು ಮತ್ತು 17 ಏಜೆನ್ಸಿಗಳ ಮೂಲಕ ವ್ಯವಹಾರ ನಡೆಸುತ್ತಿದೆ ಎಂದು ಹೇಳಿದರು.

26,191 ಸದಸ್ಯರನ್ನು ಹೊಂದಿದ್ದು 60 ಕೋಟಿ ರೂ. ಸ್ವಂತ ಬಂಡವಾಳದೊಂದಿಗೆ ಒಟ್ಟು 291 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ 148 ಕೋಟಿ ರೂ. ಮೌಲ್ಯದ ಅಡಕೆ ಖರೀದಿ ಮಾಡಲಾಗಿದ್ದು, 415 ಕೋಟಿ ರೂ. ಮೌಲ್ಯದ ಅಡಕೆ ಮಾರಾಟ ಮಾಡಲಾಗಿದೆ. ಇದರಿಂದ 7 ಕೋಟಿ ರೂ. ಕಮಿಷನ್ ಬಂದಿದೆ. ಕರೊನಾ ಸಮಯದಲ್ಲಿ ರೈತರಿಗೆ ತೊಂದರೆಯಾಗದಂತೆ ಅಡಕೆ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ಮ್ಯಾಮ್ಕೋಸ್ ಬೆಳೆಗಾರರಿಗೆ ನೈತಿಕ ಬೆಂಬಲ ನೀಡಿದೆ ಎಂದರು.

ಏಜೆನ್ಸಿ ಮೂಲಕ ಹೆಚ್ಚು ವ್ಯವಹಾರ ಮಾಡಿದ ಜಯಪುರದ ಪ್ರಭಾಕರ್ ಅವರನ್ನು ಸನ್ಮಾನಿಸಿ ಪ್ರೋತ್ಸಾಹಧನ ನೀಡಲಾಯಿತು. ಮ್ಯಾಮ್ಕೋಸ್ ನಿರ್ದೇಶಕ ಬಿ.ಸಿ.ನರೇಂದ್ರ, ಕೆಸವೆ ರಾಘವೇಂದ್ರ, ಖಾಂಡ್ಯ ಶಿವರಾಜ್, ಗಣಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net