

ಗೋಪಾಲಕೃಷ್ಣ ಪಾದೂರು ಉಡುಪಿ
ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ ಪೌರಕಾರ್ಮಿಕರ ಹಾಜರಾತಿಯಿಂದ ಹಿಡಿದು ಮಾಸ್ಕ್ ಹಾಕದವರಿಗೆ ದಂಡ ವಿಧಿಸುವರೆಗಿನ ಸುಮಾರು 25ರಿಂದ 30 ಕಾರ್ಯಭಾರ ಹೊಂದಿರುವ ಆರೋಗ್ಯ ನಿರೀಕ್ಷಕರ ಹುದ್ದೆಗಳು ಭರ್ತಿಯಾಗಿಲ್ಲ. ಇದರಿಂದ ಕೋವಿಡ್ ಸಂದರ್ಭದಲ್ಲಿ ಹೆಚ್ಚುವರಿ ಕೆಲಸದ ಒತ್ತಡದಿಂದ ಸಿಬ್ಬಂದಿ ಬಳಲುವಂತಾಗಿದೆ.
ಉಡುಪಿ ನಗರಸಭೆ, ಕುಂದಾಪುರ, ಕಾರ್ಕಳ, ಕಾಪು ಪುರಸಭೆ, ಸಾಲಿಗ್ರಾಮ ಹಾಗೂ ಬೈಂದೂರು ಪಟ್ಟಣ ಪಂಚಾಯಿತಿ ಸಹಿತ 6 ನಗರ ಸ್ಥಳೀಯ ಸಂಸ್ಥೆಗಳಿದ್ದು, ಇಲ್ಲಿ ಆರೋಗ್ಯ ನಿರೀಕ್ಷಕ ಹುದ್ದೆ ಪ್ರಮುಖ ಸ್ಥಾನ. ಆದರೆ ಹೆಚ್ಚಿನ ಕಡೆಗಳಲ್ಲಿ ಪ್ರಭಾರ ನೆಲೆಯಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಡುಪಿ ನಗರಸಭೆಯಲ್ಲಿ 6 ಹುದ್ದೆಗಳು ಮಂಜೂರಾಗಿದ್ದು, ಇಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಕಳದಲ್ಲಿ ಪರಿಸರ ಅಭಿಯಂತರ ಹಾಗೂ ಕಿರಿಯ ಆರೋಗ್ಯ ನಿರೀಕ್ಷರ ಹುದ್ದೆ ಖಾಲಿ ಇದೆ. ಸಾಲಿಗ್ರಾಮದಲ್ಲಿ 6 ವರ್ಷಗಳಿಂದ ಪ್ರಭಾರ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಪು ಪುರಸಭೆಯಲ್ಲಿ ಹಿರಿಯ ಅರೋಗ್ಯ ನಿರೀಕ್ಷಕರಿದ್ದು, 2 ಕಿರಿಯ ಅರೋಗ್ಯ ನಿರೀಕ್ಷರ ಹುದ್ದೆ ಖಾಲಿಯಾಗಿದೆ. ಬೈಂದೂರಿನಲ್ಲಿ ಪ್ರಭಾರ ನೆಲೆಯಲ್ಲಿ ಅಧಿಕಾರಿಯೊಬ್ಬರು ಕೆಲಸ ಮಾಡುತ್ತಿದ್ದಾರೆ. ಕುಂದಾಪುರದಲ್ಲಿ 2 ಹುದ್ದೆಗಳು ಮಾತ್ರ ಭರ್ತಿಯಾಗಿವೆ.
ಕೆಲಸದೊತ್ತಡಕ್ಕೆ ಹೈರಾಣ
ಬೆಳಗ್ಗೆ 5 ಗಂಟೆಗೆ ಪೌರಕಾರ್ಮಿಕರ ಹಾಜರಾತಿ ಪಡೆದು ಸ್ವಚ್ಛತೆ ಮೇಲುಸ್ತುವಾರಿ ನೋಡಿಕೊಳ್ಳುವುದರಿಂದ ಆರೋಗ್ಯ ನಿರೀಕ್ಷಕರ ಕೆಲಸ ಪ್ರಾರಂಭವಾಗುತ್ತದೆ. ಬೀದಿ ನಾಯಿ ನಿಯಂತ್ರಣ, ಅನಾಥ ಶವ ಸಂಸ್ಕಾರ, ಅಪಾಯಕಾರಿ ಮರ ತೆರವು, ಮಳೆಗಾಲದ ತುರ್ತು ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ, ಮನೆ-ಮನೆ ಕಸ ಸಂಗ್ರಹ ಉಸ್ತುವಾರಿ, ಸ್ವಚ್ಛತಾ ವಾಹನಗಳ ರಿಪೇರಿಗೆ ಕ್ರಮ, ಕೋಟ್ಪಾ ಅನುಷ್ಠಾನ, ಟ್ರೇಡ್ ಲೈಸೆನ್ಸ್, ಸಾರ್ವಜನಿಕ ದೂರಿಗೆ ಸ್ಪಂದನೆ, ಜನನ-ಮರಣ ನೋಂದಣಿ ಅಧಿಕಾರಿ, ಪ್ರಮಾಣ ಪತ್ರಗಳ ವಿತರಣೆ, ತಿದ್ದುಪಡಿ ಕ್ರಮ, ಸಾಮಾನ್ಯ ಜವಾಬ್ದಾರಿಗಳಾಗಿವೆ. ಕೋವಿಡ್ ಸಂದರ್ಭ ಮತ್ತೆ ಹೆಚ್ಚುವರಿ ಕೆಲಸಗಳು ಹೆಗಲೇರಿದ್ದು, ಇಂದಿರಾ ಕ್ಯಾಂಟೀನ್ ಮೇಲ್ವಿಚಾರಣೆ, ಕರೊನಾ ಸಾವು ಅಂಕಿ ಸಂಖ್ಯೆ ಸಂಗ್ರಹ, ಅಂತ್ಯಸಂಸ್ಕಾರಕ್ಕೆ ಕ್ರಮ, ಸರ್ಕಾರಿ ಕಚೇರಿಗಳಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದರೆ ಅಂಥ ಕಟ್ಟಡಗಳ ಸ್ಯಾನಿಟೈಸೇಶನ್ ಮುಂತಾದ ಕಾರ್ಯಗಳನ್ನು ಆರೋಗ್ಯ ನಿರೀಕ್ಷಕರು ನಿರ್ವಹಿಸಬೇಕು. ಪರಿಸರ ಅಭಿಯಂತರ ಅಧೀನದಲ್ಲಿ ಆರೋಗ್ಯ ನಿರೀಕ್ಷಕರ ಹುದ್ದೆಯಿದ್ದು, ಇಲ್ಲಿಯೂ ಕಾಪು- ಕಾರ್ಕಳ- ಉಡುಪಿಗೆ ಒಬ್ಬರೇ ಪ್ರಭಾರ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆರೋಗ್ಯ ನಿರೀಕ್ಷಕರಿಗೆ ಹೆಚ್ಚಿನ ಜವಾಬ್ದಾರಿಯಿದ್ದು, ಖಾಲಿ ಸ್ಥಾನ ಭರ್ತಿ ಮಾಡುವಂತೆ ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕೋವಿಡ್ ಸಂದರ್ಭ ಹೆಚ್ಚುವರಿ ಕೆಲಸಗಳಿಗೂ ನಿಯೋಜನೆ ಮಾಡಲಾಗಿದೆ. ಇದರಿಂದ ನಗರಸಭೆಗೆ ಆಗಮಿಸುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಕನಿಷ್ಠ 2 ಸ್ಥಾನಕ್ಕೆ ಅಧಿಕಾರಿಗಳನ್ನು ನೇಮಿಸಲು ಪ್ರಯತ್ನಿಸಲಾಗುತ್ತಿದೆ.
ಸುಮಿತ್ರಾ ನಾಯಕ್, ಅಧ್ಯಕ್ಷೆ, ಉಡುಪಿ ನಗರಸಭೆ