ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆ ನಿರಂತರವಾಗಿರಲಿ

21Jaggu4
ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಶನಿವಾರ ‘ಇಕ್‌ಶಾನಾ’ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ.ನಿತಿನ್ ಗಂಗಾನೆ, ಡಾ.ಸ್ಮಿತಾ ಪ್ರಭು, ಡಾ.ಎನ್.ಎಸ್.ಮಹಾಂತಶೆಟ್ಟಿ, ಡಾ.ಕೃಷ್ಣಪ್ರಸಾದ ಆರ್., ಡಾ.ವಿ.ಡಿ. ಪಾಟೀಲ, ಡಾ.ಕರ್ನಲ್ ದಯಾನಂದ, ಡಾ.ಎಂ.ಎಸ್. ಗಣಾಚಾರಿ, ಡಾ.ರಾಜೇಶ ಪವಾರ ಇತರರಿದ್ದರು.
Published on

ಬೆಳಗಾವಿ: ಖಾಸಗಿ ವೈದ್ಯಕೀಯ ಸಂಸ್ಥೆಗಳು ಸರ್ಕಾರದೊಂದಿಗೆ ಜತೆಗೂಡಿ ಸಮಾಜವನ್ನು ಆರೋಗ್ಯವಾಗಿಡಲು ಸಂಶೋಧನೆ, ಆರೋಗ್ಯ ಸೌಲಭ್ಯ ಕಲ್ಪಿಸುವಲ್ಲಿ ನಿರತವಾಗಿರಬೇಕು ಎಂದು ಕಾಹೆರ್ ಉಪಕುಲಪತಿ ಡಾ.ನಿತಿನ್ ಗಂಗಾನೆ ಹೇಳಿದರು.

ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ನೇತ್ರವೈದ್ಯೆ ಡಾ.ಸ್ಮಿತಾ ಪ್ರಭು ಅಭಿವೃದ್ಧಿ ಪಡಿಸಿದ ‘ಇಕ್‌ಶಾನಾ’ ಮೊಬೈಲ್ ಅಪ್ಲಿಕೇಶನ್’ನನ್ನು ಶನಿವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನರರೋಗ ಸಮಸ್ಯೆಯಿಂದ ಬಳಲುತ್ತಿರುವ ಚಿಕ್ಕಮಕ್ಕಳು ನೇತ್ರದೋಷ ಹೊಂದಿರುತ್ತಾರೆ. ಅಂತವರ ಭವಿಷ್ಯದ ದೃಷ್ಟಿಯಿಂದ ಸಂಶೋಧನೆಗಳ ಅಗತ್ಯತೆ ಹೆಚ್ಚಿದೆ. ವೈದ್ಯಕೀಯ ಉಪಕರಣಗಳಿಗೆ ವಿದೇಶಗಳನ್ನು ಅವಲಂಭಿಸುವ ಬದಲಿಗೆ ನಮ್ಮಲ್ಲಿಯೇ ಸಂಶೋಧನೆ, ಉತ್ಪಾದನೆ ಆರಂಭಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಈ ಜಾಗೃತಿ ಹೆಚ್ಚಿಸಬೇಕಿದೆ ಎಂದರು.

ಜೆಎನ್ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ.ಎನ್.ಎಸ್. ಮಹಾಂತಶೆಟ್ಟಿ ಮಾತನಾಡಿ, ನರರೋಗ ಸಮಸ್ಯೆಯಿಂದ ಬಳಲುತ್ತಿರುವ ಚಿಕ್ಕಮಕ್ಕಳ ಬಗ್ಗೆ ಕಾಳಜಿ ವಹಿಸಿ ಅವರ ದೃಷ್ಟಿ ಮರಳಿ ತರಲು ಹೆಚ್ಚಿನ ಪ್ರಯತ್ನಗಳು ನಡೆಯಬೇಕು. ಆರೋಗ್ಯದ ಅಪಾಯಗಳನ್ನು ಗುರುತಿಸಲು ಮೊಬೈಲ್ ಆ್ಯಪ್ ಸಹಾಯ ಮಾಡಲಿದೆ ಎಂದರು.

ಹುಬ್ಬಳ್ಳಿಯ ಎಂ.ಎಂ. ಜೋಷಿ ಕಣ್ಣಿನ ಆಸ್ಪತ್ರೆಯ ಡಾ.ಕೃಷ್ಣಪ್ರಸಾದ ಆರ್. ಮಾತನಾಡಿ, ಬದಲಾವಣೆ ಹೊರಗಿನಿಂದ ಬರಬೇಕೆಂದು ಬಯಸುವ ಬದಲು ನಮ್ಮಿಂದಲೇ ಬದಲಾವಣೆ ಆರಂಭಗೊಳ್ಳಬೇಕು ಎನ್ನುವ ಪ್ರವೃತ್ತಿ ಬೆಳೆಯಬೇಕು. ಆರೋಗ್ಯ ಕ್ಷೇತ್ರದ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಜ್ಞವೈದ್ಯ ಡಾ.ವಿ.ಡಿ. ಪಾಟೀಲ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಕರ್ನಲ್ ದಯಾನಂದ ಮಾತನಾಡಿದರು. ಕುಲಸಚಿವ ಡಾ.ಎಂ.ಎಸ್. ಗಣಾಚಾರಿ, ಉಪಪ್ರಾಚಾರ್ಯ ಡಾ.ರಾಜೇಶ ಪವಾರ, ಡಾ.ಆರೀಫ್ ಮಾಲ್ದಾರ, ತಜ್ಞವೈದ್ಯರಾದ ಡಾ.ಅರವಿಂದ ತೆನಗಿ, ಡಾ.ಎಸ್.ಬಿ. ಪಾಟೀಲ, ಡಾ.ಭಾಗ್ಯಜ್ಯೋತಿ, ಡಾ.ಚೇತನಾ, ಡಾ.ಮಹೇಶ ಕಮತೆ, ಡಾ.ವಿನಾಯಕ ಕೋಪರ್ಡೆ, ಡಾ.ರಾಮಚಂದ್ರ ಭಟ್, ಡಾ.ಮೀನಾ, ಡಾ.ನೇಹಾ ಇತರರಿದ್ದರು. ಡಾ.ಶಿವಾನಂದ ಬೂಬನಾಳೆ ಸ್ವಾಗತಿಸಿದರು. ಡಾ.ಸ್ಮಿತಾ ಪ್ರಭು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net