ಪರಿಸರದ ಸ್ವಚ್ಛತೆಯಿಂದ ಆರೋಗ್ಯ ವೃದ್ಧಿ

24 HRS 02
ಹಿರೀಸಾವೆ ಹೋಬಳಿ ಪಿ.ಹೊಸಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಶಿಬಿರಾರ್ಥಿಗಳಿಂದ ಶುಕ್ರವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
Published on

ಹಿರೀಸಾವೆ: ಹೋಬಳಿಯ ಪಿ.ಹೊಸಹಳ್ಳಿ ಗ್ರಾಮದಲ್ಲಿ ಹಿರೀಸಾವೆ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ಎನ್‌ಎಸ್‌ಎಸ್ ಶಿಬಿರದ ಪ್ರಯುಕ್ತ ಶುಕ್ರವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಪ್ರಾಂಶುಪಾಲ ಡಾ.ಎಚ್.ಎನ್.ಬಸವರಾಜು ಮಾತನಾಡಿ, ನಮ್ಮ ಸುತ್ತಮುತ್ತಲ ಪರಿಸರವನ್ನು ನಾವೇ ಜವಾಬ್ದಾರಿ ವಹಿಸಿಕೊಂಡು ಸ್ವಚ್ಛವಾಗಿರಿಸಿಕೊಂಡಲ್ಲಿ ಮಾತ್ರ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಾಧ್ಯ ಎಂದರು.

ಕೆರೆ ಪ್ರದೇಶ, ದೇಗುಲ, ಶಾಲಾ ಆವರಣ, ಚರಂಡಿಗಳು ಹಾಗೂ ರಸ್ತೆ ಬದಿಗಳಲ್ಲಿ ಬೆಳೆಯುವ ಅನಗತ್ಯ ಗಿಡಗಳು ಹಾಗೂ ಹರಡಿಕೊಂಡಿರುವ ಕಸ, ಕಡ್ಡಿ ಹಾಗೂ ತ್ಯಾಜ್ಯವನ್ನು ತೆರವುಗೊಳಸಿದರೆ ಸ್ವಚ್ಛತೆಯ ಜತೆಗೆ ಯಾವುದೇ ರೋಗಗಳು ಹರಡುವುದಿರಲಿ ಉತ್ಪತ್ತಿಯಾಗದಂತೆ ನಿಯಂತ್ರಿಸಿದಂತಾಗುತ್ತದೆ ಎಂದು ತಿಳಿಸಿದರು.

ಸ್ವಚ್ಛತೆ ಕಡಿಮೆಯಾದಂತೆಲ್ಲ ಇನ್ನಿಲ್ಲದ ಕಾಯಿಲೆಗಳ ಉತ್ಪತ್ತಿ ಹಾಗೂ ಹರಡುವಿಕೆ ಹೆಚ್ಚುತ್ತಿದೆ. ಅನೈರ್ಮಲ್ಯ ಹೆಚ್ಚಿದರೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಲಿದೆ. ಈಗಾಗಲೇ ಕರೊನಾ ವೈರಸ್ ಕಾಣಿಸಿಕೊಂಡು ಸಾಕಷ್ಟು ಸಾವು-ನೋವುಗಳನ್ನು ಕಂಡಿದ್ದೇವೆ. ದಯವಿಟ್ಟು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ ಎಂದು ಕೋರಿದರು.

ಗ್ರಾಮದ ಮುಖ್ಯರಸ್ತೆ ಬದಿ, ಶಾಲೆ ಹಾಗೂ ದೇಗುಲದ ಆವರಣ, ರಂಗ ಮಂಟಪದ ಸುತ್ತ ಹಾಗೂ ಪ್ರಮುಖ ಬೀದಿಗಳಲ್ಲಿ ಶಿಬಿರಾರ್ಥಿಗಳು ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದ್ದು, ಸಾರ್ವಜನಿಕರಲ್ಲಿ ಸ್ವಚ್ಛತೆ ಹಾಗೂ ಅದರಿಂದಾಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯೆ ರೇಣುಕಾ ಸೋಮಶೇಖರ್, ಶಿಬಿರಾಧಿಕಾರಿ ಕುಮಾರ್, ಸಹಾಯಕ ಶಿಬಿರಾಧಿಕಾರಿ ಆಶಾ, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹಿರೀಸಾವೆ ಹೋಬಳಿ ಅಧ್ಯಕ್ಷ ಆರ್.ಶ್ರೀನಿವಾಸ್ ಉಳ್ಳಾವಳ್ಳಿ ಹಾಗೂ ಶಿಬಿರಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net