ಆರೋಗ್ಯ ಮೇಳದಲ್ಲಿ 200ಕ್ಕೂ ಹೆಚ್ಚು ತಜ್ಞ ವೈದ್ಯರು ಭಾಗಿ

Doctor
Published on

ಮಾನ್ವಿ: ಪಟ್ಟಣದ ಬಾಷುಮಿಯ ಸರ್ಕಾರಿ ಪದವಿ ಕಾಲೇಜ್ ಆವರಣದಲ್ಲಿ ಮಾ.15ರಂದು ಬೃಹತ್ ಆರೋಗ್ಯ ಮೇಳ ಹಮ್ಮಿಕೊಂಡಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಯಚೂರು ವಿಭಾಗದ ಸಹಾಯಕ ಆಯುಕ್ತ ಗಜಾನನ ಬಾಲೆ ಹೇಳಿದರು.

ಆರೋಗ್ಯ ಮೇಳ ನಡೆಯುವ ಸ್ಥಳಕ್ಕೆ ಮಂಗಳವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿ ಮಾತನಾಡಿದರು. ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡಲು ಮೇಳ ಆಯೋಜಿಸಲಾಗಿದೆ.

ಮೇಳದಲ್ಲಿ ಹೃದಯ, ಸ್ತ್ರೀರೋಗ, ಮಕ್ಕಳ, ಎಲುಬು ಮತ್ತು ಕೀಲು, ಕ್ಯಾನ್ಸರ್, ಮಾನಸಿಕ ರೋಗ, ಮೂತ್ರಪಿಂಡ, ಶಸ್ತ್ರಚಿಕಿತ್ಸೆ, ಕಿವಿ, ಮೂಗು ಮತ್ತು ಗಂಟಲು, ನೇತ್ರ ಚರ್ಮರೋಗ, ದಂತ, ಶ್ವಾಸಕೋಶ ಸೇರಿ ಹಲವಾರು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು 200ಕ್ಕೂ ಹೆಚ್ಚು ತಜ್ಞ ವೆದ್ಯರು ಆಗಮಿಸಲಿದ್ದಾರೆ. ಉಚಿತವಾಗಿ ಲ್ಯಾಬ್ ಟೆಸ್ಟ್, ಕ್ಷಯರೋಗ ಪರೀಕ್ಷೆಗೆ ಸಂಬಂಧಿಸಿ ಎಲ್ಲ ತಪಾಸಣೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಡಿಎಚ್‌ಒ ಡಾ.ಸುರೇಂದ್ರ ಬಾಬು ಮಾತನಾಡಿ, ಮೇಳದಲ್ಲಿ ಭಾಗವಹಿಸುವವರು ಹಿಂದಿನ ಚಿಕಿತ್ಸೆ ವಿವರಗಳು, ವೈದ್ಯಕೀಯ ದಾಖಲೆಗಳು, ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಕಡ್ಡಾಯವಾಗಿ ತರಬೇಕು. ವಿಶೇಷ ಬಸ್, ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಹೊರರೋಗಿ ಕೇಂದ್ರಗಳನ್ನು ತೆರೆದಿದ್ದು, ನೋಂದಣಿ ಮಾಡಿಸಿ ತಜ್ಞ ವೈದ್ಯರಿಂದ ತಪಾಸಣೆಗೆ ಒಳಗಾಗಬೇಕು. ಉಚಿತವಾಗಿ ಇಸಿಜಿ ಮತ್ತು ಇಕೋ ಪರೀಕ್ಷೆ ಮಾಡಲಾಗುವುದು. ರಕ್ತದಾನ ಹಾಗೂ ಅಂಗಾಂಗ ದಾನ ನೋಂದಣಿ ವ್ಯವಸ್ಥೆಯೂ ಮಾಡಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ನಂದಿತಾ, ತಾಲೂಕು ಆರೋಗ್ಯಾಧಿಕಾರಿ ಡಾ.ಶರಣಬಸವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net