

ಹೊರ್ತಿ: ಶ್ರಾವಣ ತಿಂಗಳು ತ್ಯಾಗದ ಸಂಕೇತವಾಗಿದೆ. ಸನ್ಮಾರ್ಗ, ತತ್ವ- ಆದರ್ಶ ವಿಚಾರ ಪಾಲನೆ, ಸದ್ವಿಚಾರ, ಚಿಂತನ, ಮಂಥನ ಆಲನೆ-ಪಾಲನೆಯ ಮಾಸವಾಗಿದೆ ಎಂದು ಕಾತ್ರಾಳ-ಬಾಲಗಾಂವ ಗುರುದೇವ ಆಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು.
ರೇವಣಸಿದ್ಧೇಶ್ವರ ದೇವಸ್ಥಾನ ಸಂಸ್ಥೆಯಿಂದ ಗ್ರಾಮದ ರೇವಣಸಿದ್ಧೇಶ್ವರ ಹಳೇ ದೇವಸ್ಥಾನದ ಮಂಗಲ ಭವನದಲ್ಲಿ ಹುನಗುಂದ ತಾಲೂಕಿನ ಅಮೀನಗಡದ ಮಾತೋಶ್ರೀ ಪಾರ್ವತಿ ಚೋಳಚಗುಡ್ಡ ಅಮ್ಮನವರ ನೇತೃತ್ವದಲ್ಲಿ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದುಶ್ಚಟಗಳ ತ್ಯಾಗ ಮಾಡುವ ಜತೆಗೆ ಸಾತ್ವಿಕ ಆಹಾರ ಸೇವನೆ ಮಾಡಬೇಕು. ನಿತ್ಯ ಸದ್ಗುರುಗಳ ಹಿತವಚನ ಶ್ರವಣ, ಸನ್ಮಾರ್ಗದಲ್ಲಿ ನಡೆಯುವುದರಿಂದ ಸುಂದರ ಜೀವನ ಕಂಡುಕೊಳ್ಳಲು ಸಾಧ್ಯ ಎಂದರು.
ಪಾರ್ವತಿ ಚೋಳಚಗುಡ್ಡ ಅಮ್ಮನವರು ಮಾತನಾಡಿ, ಮಾಸಗಳಲ್ಲಿ ಶ್ರಾವಣ ಮಾಸ ಅತ್ಯಂತ ಶ್ರೇಷ್ಠತೆ ಹೊಂದಿದೆ. ಶ್ರಾವಣ ಮಾಸದಲ್ಲಿ ಸಂತರು, ಗುರುಗಳ ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಮಾಧಾನ ಲಭಿಸುತ್ತದೆ. 1 ತಿಂಗಳು ಶ್ರಾವಣ ಪಾಲಿಸಬೇಕು, ಆಗದಿದ್ದರೆ 9 ದಿನ ನವರಾತ್ರಿ ಪಾಲಿಸಬೇಕು, ಅದೂ ಆಗದಿದ್ದರೆ 1 ದಿನ ಶಿವರಾತ್ರಿ ಪಾಲಿಸಬೇಕು. ಸಾಧ್ಯವಾದಷ್ಟು ಸಮಯವನ್ನು ಅಧ್ಯಾತ್ಮ ಪ್ರವಚನ ಕೇಳಲು ಮೀಸಲಿಡಬೇಕು ಎಂದರು.
ದೇವಸ್ಥಾನ ಸಂಸ್ಥೆ ಅಧ್ಯಕ್ಷ ಅಣ್ಣಪ್ಪ ಸಾಹುಕಾರ ಖೈನೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗುರಪ್ಪ ಪೂಜಾರಿ, ಬಸವರಾಜ ಸಾವಕಾರ, ಬಸವರಾಜ ಜಂಬಗಿ, ವಿಶ್ವನಾಥ ಜಂಗಮಶೆಟ್ಟಿ, ಶರಣು ಡೋಣಗಿ ಇದ್ದರು.