

ಬೆಂಗಳೂರು ಗ್ರಾಮಾಂತರ: ಕ್ಷಯ ರೋಗದ ಕುರಿತು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.
ದೇವನಹಳ್ಳಿ ತಾಲೂಕು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕ್ರಿಯಾಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕ್ಷಯ ರೋಗವನ್ನು ಆರಂಭದ ಹಂತದಲ್ಲೇ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ಪಡೆಯುವುದರಿಂದ ರೋಗ ನಿಯಂತ್ರಿಸಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕ್ಷಯ ರೋಗ ಪರೀಕ್ಷೆ ಚುರುಕುಗೊಳಿಸಬೇಕು. ಸೋಂಕಿತರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕಿಸಬೇಕು. ಈ ನಿಟ್ಟಿನಲ್ಲಿ ವೈದ್ಯಕೀಯ ಸಿಬ್ಬಂದಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಬೇಕು ಎಂದರು.
ಕ್ಷಯ ರೋಗ ಪತ್ತೆಯಾದ ಎಲ್ಲ ರೋಗಿಗಳಿಗೆ ಪ್ರಧಾನಮಂತ್ರಿ ಬಿಮಾ ಯೋಜನೆಯಲ್ಲಿ ವಿಮೆಗೆ ಒಳಪಡಿಸಬೇಕು. ಈ ಬಗ್ಗೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಜನರು ಉಗುಳದಂತೆ ಎಚ್ಚರವಹಿಸಬೇಕು. ಒಂದು ವೇಳೆ ಯಾರಾದರೂ ಉಗುಳಿದರೆ ಅಂತಹವರಿಗೆ ದಂಡ ವಿಧಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಶಕೀಲಾ ಮಾತನಾಡಿ, ಯಾವುದೇ ವ್ಯಕ್ತಿಯಲ್ಲಿ ಎರಡು ವಾರಕ್ಕಿಂತಲೂ ಹೆಚ್ಚು ಕಾಲ ಕೆಮ್ಮು ಇರುವುದು, ಅನಿರೀಕ್ಷಿತವಾಗಿ ದೇಹದ ತೂಕ ಕಡಿಮೆ ಆಗುವುದು, ಸಂಜೆ ವೇಳೇ ಮಾತ್ರ ಜ್ವರ ಬರುವುದು, ಆಯಾಸ ಆಗುವುದು, ಉಸಿರಾಟದಲ್ಲಿ ತೊಂದರೆ ಕಾಣುವುದು, ಹಸಿವು ಆಗದಿರುವಂತಹ ಲಕ್ಷಣಗಳು ಕ್ಷಯ ರೋಗದ ಸೂಚನೆ. ಈ ಲಕ್ಷಣಗಳು ಕಂಡುಬಂದವರು ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಕಳೆದ ವರ್ಷ 13,005 ಮಂದಿ ಕ್ಷಯ ರೋಗ ಶಂಕೆ ಇರುವವರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಈ ಪೈಕಿ 1075 ಮಂದಿಗೆ ಕ್ಷಯ ರೋಗ ಧೃಡಪಟ್ಟಿದ್ದು, ಶೇ.74ಕ್ಕಿಂತಲೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ ಎಂದರು.
ಪ್ರಸ್ತುತ ವರ್ಷದಲ್ಲಿ 3938 ಕ್ಷಯ ರೋಗ ಶಂಕೆ ಇರುವವರನ್ನು ಪರೀಕ್ಷೆಗೊಳಪಡಿಸಿದ್ದು, 398 ಮಂದಿಗೆ ಕ್ಷಯ ರೋಗ ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.