

ಚಿಕ್ಕಬಳ್ಳಾಪುರ: ಔಷಧಗಳ ಖರೀದಿಗೆ ಹೊರಗಡೆ ಕಳುಹಿಸುವಿಕೆ, ತಾತ್ಸರ ಮನೋಭಾವನೆಯಲ್ಲಿ ಚಿಕಿತ್ಸೆಗೆ ಸತಾಯಿಸುವಿಕೆ, ಸಿಬ್ಬಂದಿಯ ಅಸಮರ್ಪಕ ಸ್ಪಂದನೆ.
ಇವು ಅವ್ಯವಸ್ಥೆ ಮತ್ತು ಹಣ ವಸೂಲಿ ಆರೋಪಗಳಿಗೆ ನಿರಂತರವಾಗಿ ತುತ್ತಾಗುತ್ತಿರುವ ಜಿಲ್ಲಾಸ್ಪತ್ರೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್ ಮಿಸ್ಕಿನ್ ಮತ್ತು ಲೋಕಾಯುಕ್ತ ಡಿವೈಎಸ್ಪಿ ಪುರುಷೋತಮ್ ನೇತೃತ್ವದ ತಂಡವು ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಕೇಳಿ ಬಂದ ದೂರುಗಳು.
ಮೊದಲಿನಿಂದಲೂ ಜಿಲ್ಲಾಸ್ಪತ್ರೆಯಲ್ಲಿನ ಚಿಕಿತ್ಸೆಯ ಬಗ್ಗೆ ವ್ಯಾಪಕವಾಗಿ ಆರೋಪಗಳು, ಟೀಕೆಗಳು ಬರುತ್ತಿವೆ. ಇದರ ನಡುವೆ ಮಂಗಳವಾರ ರೋಗಿಗಳು ನೇರ ದೂರುಗಳನ್ನು ಹೇಳಿ, ಅವ್ಯವಸ್ಥೆಯನ್ನು ಸರಿಪಡಿಸಲು ಮನವಿ ಮಾಡಿದರು.
ಆಸ್ಪತ್ರೆಯ ನೋಂದಣಿ ಕೇಂದ್ರ, ಔಷಧ ವಿತರಣೆ ಸೇರಿ ಇತರೆಡೆ ಸಿಬ್ಬಂದಿ ಮೊಬೈಲ್‌ನಲ್ಲಿ ತಲ್ಲೀನರಾಗಿರುತ್ತಾರೆ. ಗಂಟೆಗಟ್ಟಲೇ ಕಾಯಬೇಕು. ಇಲ್ಲಿನ ವೈದ್ಯರಿಂದ ಆರೋಗ್ಯ ಸೇವೆ ಪಡೆಯಲು ಒಂದು ದಿನ ಕಳೆಯಬೇಕು. ಇಲ್ಲಿನ ಔಷಧಗಳನ್ನು ಖರೀದಿಸಲು, ವಿವಿಧ ಪರೀಕ್ಷಾ ವರದಿಗಳಿಗೆ ಖಾಸಗಿ ಮೆಡಿಕಲ್ ಸ್ಟೋರ್ ಮತ್ತು ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತದೆ ಎಂದು ಆರೋಪಿಸಿದರು.
ಅನಿರೀಕ್ಷಿತ ಭೇಟಿ ಸಂದರ್ಭದಲ್ಲಿ ರೋಗಿಗೆ ಔಷಧ ಚೀಟಿಯಲ್ಲಿನ ಪೈಕಿ ಕೆಲ ಔಷಧ ನೀಡದಿರುವುದು, ಮರಣೋತ್ತ ಪರೀಕ್ಷಾ ಕೊಠಡಿ ಬಳಿ ಪೊಲೀಸರಿಂದಲೇ ಸಿಬ್ಬಂದಿ ಹಣ ಪಡೆಯುವಿಕೆಯ ಪ್ರಕರಣಗಳು, ಕೆಟ್ಟು ಹೋದ ಸಿಸಿ ಕ್ಯಾಮೆರಾ ಸೇರಿ ಹಲವು ಸಮಸ್ಯೆಗಳು ಕಂಡು ಬಂದವು.
ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಶ್ ಕುಮಾರ್, ಸರ್ಕಾರಿ ವೈದ್ಯಕೀಯ ಶಿಕ್ಷಣ ಕಾಲೇಜಿನ ಮುಖ್ಯಾಧಿಕಾರಿ ಡಾ.ಸಿದ್‌ಕಿ ಮತ್ತಿತರರು ಇದ್ದರು.
ಆಸ್ಪತ್ರೆ ಸಿಬ್ಬಂದಿಗೆ ತರಾಟೆ: ಆರೋಗ್ಯ ಸಚಿವರು ಪ್ರತಿನಿಧಿ ಕ್ಷೇತ್ರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು. ಯಾವುದೇ ಕಾರಣಕ್ಕೂ ಕೆಟ್ಟ ಹೆಸರು ತರಬಾರದು. ಕರೊನಾ ಸೋಂಕಿನ ಬಳಿಕ ಸಿಬ್ಬಂದಿ ವೇತನವನ್ನು ಹೆಚ್ಚಿಸಲಾಗಿದೆ. ಆಸ್ಪತ್ರೆಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೂ ದೂರುಗಳು ಕೇಳಿ ಬರುತ್ತಿರುವುದು ದುರದೃಷ್ಟಕರ ಎಂದು ಪುರುಷೋತ್ತಮ್ ಅಸಮಾಧಾನ ವ್ಯಕ್ತಪಡಿಸಿದರು.