ದಡಾರ ರೂಬೆಲ್ಲಾ ರೋಗ ನಿರ್ಮೂಲನೆಗೆ ಕ್ರಮ: ಜಿಲ್ಲಾಧಿಕಾರಿ ಕೂರ್ಮಾರಾವ್

udp-2-dc
Published on

ಉಡುಪಿ: ಮಕ್ಕಳಲ್ಲಿ ಕಂಡು ಬರುವ ದಡಾರ ರೂಬೆಲ್ಲಾ ರೋಗವನ್ನು ಜಿಲ್ಲೆಯಿಂದ ಸಂಪೂರ್ಣ ನಿರ್ಮೂಲನೆ ಮಾಡುವ ಕುರಿತು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಸೂಚನೆ ನೀಡಿದರು.

ಶುಕ್ರವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಎಂ.ಆರ್.ಎಲಿಮಿನೇಷನ್ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಡಾರ ರುಬೆಲ್ಲಾ ಕಾಯಿಲೆಯು 5 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ಅಪಾಯಕಾರಿಯಾಗಿದೆ. ದಡಾರ ತೀವ್ರ ಸಾಂಕ್ರಾಮಿಕ ರೋಗವಾಗಿದ್ದು, ಇದರಿಂದ ಮಕ್ಕಳಲ್ಲಿ ಜ್ವರ ಕಾಣಿಸಿಕೊಳ್ಳಲಿದೆ. ಚರ್ಮದ ಮೇಲೆ ಕೆಂಪು ದದ್ದುಗಳು ಉಂಟಾಗಲಿದೆ. ಈ ರೋಗ ಲಸಿಕೆ ಪಡೆಯದ ಮಕ್ಕಳಲ್ಲಿ ಹೆಚ್ಚು ಅಪಾಯಕಾರಿಯಾಗಲಿದ್ದು, ಮಕ್ಕಳ ಮರಣಕ್ಕೂ ಕಾರಣವಾಗಬಹುದು. ಇದರಿಂದ ಜಿಲ್ಲೆಯ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಈ ರೋಗ ಕಂಡುಬರದಂತೆ ಲಸಿಕೆ ನೀಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ವಿಶ್ವದಲ್ಲೇ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಡಾರ ರೂಬೆಲ್ಲಾ ಪ್ರಕರಣಗಳು ವರದಿಯಾಗುತ್ತಿದ್ದು, ಜಿಲ್ಲೆಯಲ್ಲಿ ಈ ವರ್ಷದ ಮೇ ಅಂತ್ಯದವರೆಗೆ 59 ಪ್ರಕರಣಗಳು ವರದಿಯಾಗಿದೆ. ಆದ್ದರಿಂದ ಜಿಲ್ಲೆಯಲ್ಲಿನ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಲಸಿಕೆ ನೀಡುವ ಕುರಿತಂತೆ ಕ್ರಿಯಾ ಯೋಜನೆ ರೂಪಿಸಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ಕಾರ್ಮಿಕ ಇಲಾಖೆಯ ಮೂಲಕ ವಲಸೆ ಕಾರ್ಮಿಕರ ಮಕ್ಕಳು ದಡಾರ ರೂಬೆಲ್ಲಾ ಲಸಿಕೆ ಪಡೆಯುವ ಕುರಿತಂತೆ ಅವರು ಕೆಲಸ ಮಾಡುವ ಪ್ರದೇಶಗಳಿಗೆ ತೆರಳಿ ಅರಿವು ಮೂಡಿಸುವಂತೆ ಮತ್ತು ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಎಲ್ಲಾ ಮಕ್ಕಳಿಗೆ ಲಸಿಕೆ ನೀಡುವಂತೆ ತಿಳಿಸಿದರು.

ಜಿಲ್ಲೆಯ ಎಲ್ಲಾ ಖಾಸಗಿ ನರ್ಸಿಂಗ್ ಹೋಂ ಗಳು ಮತ್ತು ಕ್ಲಿನಿಕ್ ಗಳು ತಮ್ಮಲ್ಲಿಗೆ ಬರುವ ಮಕ್ಕಳಲ್ಲಿ ದಡಾರ ರೂಬೆಲ್ಲಾ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಎಂಜಿ.ರಾಮ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಡಾ.ಅನಂತೇಶ್, ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net