ಮೂರು ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ದೂರು: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

Health Department Progress Review Meeting mandya
Published on

ಮಂಡ್ಯ: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಭ್ರೂಣ ಹತ್ಯೆ ಪ್ರಕರಣ ಕುರಿತಂತೆ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಕೆ.ಆರ್.ಪೇಟೆ ತಾಲೂಕಿನಲ್ಲಿ 1, ನಾಗಮಂಗಲ ತಾಲೂಕಿನಲ್ಲಿ 2 ಸ್ಕಾೃನಿಂಗ್ ಸೆಂಟರ್‌ಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 55 ಸ್ಕ್ಯಾನಿಂಗ್ ಸೆಂಟರ್, 25 ಹಾಸ್ಪಿಟಲ್, 32 ಲ್ಯಾಬ್, 130 ಕ್ಲಿನಿಕ್‌ಗಳನ್ನು ಪರಿಶೀಲಿಸಿರುವ ಬಗ್ಗೆ ನಿಯೋಜಿಸಿರುವ ವೈದ್ಯರು, ಅಧಿಕಾರಿಗಳು ಇಲ್ಲಿ ಯಾವುದೇ ಹೆಣ್ಣು ಭ್ರೂಣ ಲಿಂಗ ಪತ್ತೆ ಅಥವಾ ಅನಧಿಕೃತ ಕೃತ್ಯ ನಡೆಯುತ್ತಿಲ್ಲ ಎಂಬ ದೃಢೀಕರಣ ಪತ್ರವನ್ನು ನೀಡಬೇಕು ಎಂದರು.

ಈಗಾಗಲೇ ಜಿಲ್ಲಾ, ತಾಲೂಕು ಹಾಗೂ ಗ್ರಾಮಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅರಿವು ಕಾರ್ಯಕ್ರಮ ಇನ್ನೂ ಚುರುಕುಗೊಳ್ಳಬೇಕು. ಜಾಗೃತಿ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳನ್ನು ಹೆಚ್ಚು ತೊಡಗಿಸಿಕೊಳ್ಳಿ. ಗ್ರಾಮ ಮತ್ತು ವಾರ್ಡ್ ಸಭೆಗಳಲ್ಲಿ ಒಬ್ಬರೂ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಿ, ಸಭೆಯಲ್ಲಿ ಹೆಣ್ಣು ಭ್ರೂಣ ಹತ್ಯೆಯ ದುಷ್ಪರಿಣಾಮ ಕುರಿತು ಅರಿವು ಮೂಡಿಸಿ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಜನವರಿ ಮಾಹೆಯಿಂದ ಇಲ್ಲಿಯವರೆಗೆ 12 ವಾರಕ್ಕೂ ಮೇಲ್ಪಟ್ಟು ಗರ್ಭಪಾತವಾಗಿರುವ ಪ್ರಕರಣಗಳ ಮಾಹಿತಿ ಪಡೆದು ಅವುಗಳನ್ನು ಪರಿಶೀಲಿಸಿದ್ದಾರೆ. ಅದು ವೈದ್ಯಕೀಯ ಹಿನ್ನಲೆಯಲ್ಲಿ ವೈದ್ಯರ ಅಭಿಪ್ರಾಯದ ಮೇಲೆ ಆಗಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಮಹಿಳಾ ಪರ ಹೋರಾಟಗಾರರಾದ ಸುನಂದಾ ಜಯರಾಂ, ದೇವಿ, ಸಿ.ಕುಮಾರಿ, ವಿಮೋಚನಾ ಸಂಸ್ಥೆಯ ಸಂಚಾಲಕ ಜನಾರ್ದನ್ ಹೂತಗೆರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net