

ತುಮಕೂರು: ಕರೊನಾ ಮಹಾಮಾರಿ ಹಿಮ್ಮೆಟ್ಟಿಸುವ ಕಾರ್ಯ ಜಿಲ್ಲೆಯಲ್ಲಿ ಆರಂಭಿಕ ಯಶಸ್ಸು ಕಂಡಿದೆ. ಜಿಲ್ಲೆಯಲ್ಲಿ ಈವರೆಗೆ ಇಬ್ಬರಲ್ಲಿ ಪಾಸಿಟಿವ್ ಪತ್ತೆಯಾಗಿದೆಯಾದರೂ ಭವಿಷ್ಯದಲ್ಲಿಯೂ ಅಪಾಯ ಎದುರಿಸಲು ಸಜ್ಜಾಗಿರುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಮಲೇರಿಯಾ ಹುಟ್ಟಿದ ತುಮಕೂರು ಜಿಲ್ಲೆಯಲ್ಲಿ ಕರೊನಾ ವೈರಸ್ ತನ್ನ ಪ್ರಭಾವ ಬೀರದು ಎಂಬ ಜಿಲ್ಲೆಯ ನಂಬಿಕೆಗೆ ಬಲ ಬಂದಿದೆ.
ಕರೊನಾ ವೈರಸ್ ತಗುಲಿ ಮೃತಪಟ್ಟ ಶಿರಾ ಮೂಲದ ವೃದ್ಧನ ಜತೆಯಲ್ಲಿ ಪ್ರಯಾಣ, ಊಟ, ಒಡನಾಟದಲ್ಲಿದ್ದ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬದ 19 ಸದಸ್ಯರು, ದೆಹಲಿಗೆ ತೆರಳಿದ್ದ ಜಿಲ್ಲೆಯ 11 ಹಾಗೂ ತಿಪಟೂರು ನಗರದ 11 ಜನರಲ್ಲಿ ಕರೊನಾ ನೆಗೆಟಿವ್ ವರದಿ ಬಂದಿರುವುದಕ್ಕೆ ಭೌಗೌಳಿಕ ಹಿನ್ನೆಲೆಯೂ ಕಾರಣ ಎನ್ನಲಾಗುತ್ತಿದೆ. ಆತನ ಪುತ್ರ ಬುದ್ಧಿಮಾಂಧ್ಯನಾಗಿದ್ದು ರೋಗನಿರೋಧಕ ಶಕ್ತಿ ಇಲ್ಲದ ಕಾರಣ ಕರೊನಾ ಸೋಂಕು ಕಾಣಿಸಿಕೊಂಡಿದ್ದು ಈಗ ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.
ಶಿರಾ ವ್ಯಕ್ತಿ ಮೃತಪಡುವವರೆಗೂ ಆತನಲ್ಲಿ ಕರೊನಾ ಶಂಕಿತರಲ್ಲಿ ಅತಿಯಾಗಿ ಕಾಣಿಸುವ ರೋಗ ಲಕ್ಷಣಗಳು ಕಾಣಿಸಿರಲಿಲ್ಲ. ಆ ವ್ಯಕ್ತಿ ನ್ಯುಮೋನಿಯಾದಿಂದ ಬಳಲುತ್ತಿದ್ದ ಬಗ್ಗೆಯೂ ವ್ಯಕ್ತಿಯ ಕುಟುಂಬ ಸದಸ್ಯರು ವೈದ್ಯರಿಗೆ ಖಚಿತಪಡಿಸಿದ್ದು, ಅದಲ್ಲದೇ ಮೃತ ವ್ಯಕ್ತಿ ಸ್ವಭಾವದಲ್ಲಿ ಅಂತರ್ಮುಖಿಯಾಗಿದ್ದು ಕೂಡ ಸೋಂಕು ಇತರರಿಗೆ ಹರಡದಿರಲು ಮುಖ್ಯ ಕಾರಣವೆನ್ನಲಾಗಿದೆ.
ಸೊಳ್ಳೆಯಿಂದ ಹರಡುವ ಮಲೇರಿಯಾ ತುಮಕೂರು ಸುತ್ತಮುತ್ತಲ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಉದಾಹರಣೆಗಳು ಈ ಹಿಂದೆ ಸಾಕಷ್ಟು ಸಲ ದಾಖಲಾಗಿದೆ. ಇಲ್ಲಿನ ಜನರು ಮಲೇರಿಯಾ, ಡೆಂಘೆಯಂತಹ ಸಾಂಕ್ರಾಮಿಕ ರೋಗಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡಿರುವವರು ಕರೊನಾ ಮಹಾಮಾರಿಯಿಂದ ತಪ್ಪಿಸಿಕೊಳ್ಳಬಹುದು ಎನ್ನಲಾಗಿದ್ದರೂ ಸಾಮಾಜಿಕ ಅಂತರದಿಂದಷ್ಟೇ ಶೇ.100 ಕರೊನಾ ಹಿಮ್ಮೆಟ್ಟಿಸಲು ಇರುವ ಏಕೈಕ ತಂತ್ರವಾಗಿದೆ.
ಮಲೇರಿಯಾ ತವರು ಚಿ.ನಾ.ಹಳ್ಳಿ!: ಕರೊನಾದಷ್ಟೇ ದೇಶದ ಜನರನ್ನು ಕಾಡುವ ಮಲೇರಿಯಾ ತವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಎಂಬ ಸತ್ಯ ವೈದ್ಯಕೀಯ ಪುಸ್ತಕಗಳಲ್ಲಿಯೇ ಉಲ್ಲೇಖವಾಗಿದೆ, ಮಲೇರಿಯಾ ವಿರುದ್ಧ ಸೆಣಸಾಡಿ ದೈಹಿಕ ಕ್ಷಮತೆಯನ್ನು ಮಲೇರಿಯಾ ವೈರಾಣು ಜತೆಗೆ ಹೊಂದಿಸಿಕೊಂಡಿರುವ ಈ ಭಾಗದ ಜನರಲ್ಲಿ ಕರೊನಾ ಎದುರಿಸುವ ಕ್ಷಮತೆ ಸ್ವಾಭಾವಿಕವಾಗಿಯೇ ಬಂದಿರುತ್ತದೆ ಎಂಬುದು ಬಹುತೇಕ ವೈದ್ಯರ ಅಭಿಪ್ರಾಯವಾಗಿದೆ. ಆದರೆ, ಇದು ಮಲೇರಿಯಾ ತವರು ಎಂಬುದಕ್ಕೆ ದಾಖಲೆ ಇದೆ ಹೊರತು ಇದರಿಂದ ಕರೊನಾ ವೈರಸ್ ಎದುರಿಸಬಹುದು ಎಂಬ ಬಗ್ಗೆ ಯಾವುದೇ ಖಚಿತತೆ ಇನ್ನೂ ಇಲ್ಲ. ಆದರೆ, ಇದು ಸತ್ಯವಾಗಲಿ ಎಂಬ ಆಶಯ ಈ ಭಾಗದ ಜನರಲ್ಲಿದೆ.
ಜಿಲ್ಲಾಡಳಿತ ಸಿದ್ಧತೆ : ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾದರೆ ಚಿಕಿತ್ಸೆ ನೀಡಲು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯ ಒದಗಿಸಲಾಗಿದೆ. ಹಾಗಾಗಿ, ತಾಲೂಕು ಗಳಲ್ಲಿ ಕರೋನಾ ಸೋಂಕಿತ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಿಸಲು ಅನುಕೂಲ ವಾಗುವಂತೆ ವೆಂಟಿಲೇಟರ್ ಸೌಲಭ್ಯ ವಿರುವ ಆಂಬುಲೆನ್ಸ್ ಸಿದ್ಧಪಡಿಸಿಕೊಳ್ಳಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಲಭ್ಯವಿರುವ 108 ಆಂಬುಲೆನ್ಸ್‌ಗಳಿಗೆ ವೆಂಟಿಲೇಟರ್ ಅಳವಡಿಸಿ ಕಾರ್ಯನಿರ್ವಹಿಸುವಂತೆ ಮಾಡಿದರೆ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಲಿದೆ.