

ಮಂಗಳೂರು: ವೈದ್ಯಕೀಯ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಸೇವೆಗಳನ್ನು ನೀಡುವ ವ್ಯಕ್ತಿ ಮತ್ತು ಸಂಸ್ಥೆಗಳು ಆರೋಗ್ಯ ಇಲಾಖೆಯಲ್ಲಿ ನೋಂದಣಿಗೊಳುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ದೀಪಾ ಪ್ರಭು ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಡೆಂಟಲ್, ಆಯುಷ್, ಹೋಮಿಯೋಪಥಿ, ಫಿಸಿಯೋಥೆರಿಪಿ, ನ್ಯಾಚುರೋಪತಿ ಸೇರಿದಂತೆ ವ್ಯೆದ್ಯಕೀಯ ಸೇವೆ ನೀಡುವ ಪ್ರತಿಯೊಂದು ಕ್ಲಿನಿಕ್, ಆಸ್ಪತ್ರೆ ಮತ್ತು ವ್ಯಕ್ತಿಗಳು, ಪ್ರಯೋಗಾಲಯ, ಪರೀಕ್ಷಾ ಕೇಂದ್ರಗಳು, ಅಲ್ಟ್ರಾಸೌಂಡ್ ಸಂಸ್ಥೆಗಳು ಕಡ್ಡಾಯವಾಗಿ ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯ್ದೆ(ಕೆಪಿಎಂಇಎ) ಅಡಿ ನೋಂದಣಿಗೊಳ್ಳಬೇಕಿದೆ. ನೋಂದಣಿ ಆಗದೆ ಕಾರ್ಯ ನಡೆಸುತ್ತಿರುವ ಕ್ಲಿನಿಕ್, ಆಸ್ಪತ್ರೆ, ಸಂಸ್ಥೆಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.