

ವಿಜಯವಾಣಿ ಸುದ್ದಿಜಾಲ ಯಳಂದೂರು
ವೃದ್ಧನ ಅಂತ್ಯಸಂಸ್ಕಾರದ ಬಳಿಕ ಕರೊನಾ ತಗುಲಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಆರೋಗ್ಯ ಇಲಾಖೆಯ ಎಡವಟ್ಟಿಗೆ ಸಂಬಂಧಿಕರು ಕಿಡಿಕಾರುತ್ತಿದ್ದಾರೆ.
ಪಟ್ಟಣದ ಬಳೇಪೇಟೆಯ ಗಾಣಿಗರ ಬೀದಿಯ ನಿವಾಸಿ 70 ವರ್ಷದ ವೃದ್ಧ ಜು.27ರಂದು ಗ್ಯಾಂಗ್ರಿನ್ ಕಾರಣಕ್ಕೆ ನಗರದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಜು.31ರಂದು ಸಾವಿಗೀಡಾದರು. ಮೃತ ವ್ಯಕ್ತಿಯ ಶವವನ್ನು ಪಡೆದುಕೊಂಡ ಕುಟುಂಬದ ಸದಸ್ಯರು ಅಂತ್ಯ ಸಂಸ್ಕಾರ ನೆರವೇರಿಸಿ ಮನೆಗೆ ಬರುತ್ತಿದ್ದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಸತ್ತ ವ್ಯಕ್ತಿಗೆ ಕರೊನಾ ವರದಿ ಪಾಸಿಟಿವ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದರಿಂದ ಕುಟುಂಬದ ಸದಸ್ಯರು ಹಾಗೂ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದವರು ಆತಂಕಗೊಂಡಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆ ವರದಿ ಬರುವ ಮುನ್ನವೇ ಅಂತ್ಯಸಂಸ್ಕಾರ ನಡೆಸಲು ಅವಕಾಶ ನೀಡಿ ಕರೊನಾ ಹರಡುವಿಕೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಗ್ಯಾಂಗ್ರೀನ್‌ನಿಂದ ಬಳಲುತ್ತಿದ್ದ ವ್ಯಕ್ತಿಯ ಮೊದಲ ವರದಿ ನೆಗೆಟಿವ್ ಬಂದಿತ್ತು. ಎರಡನೇ ವರದಿ ಪಾಸಿಟಿವ್ ಆಗಿದೆ. ಹೀಗಾಗಿ ಅವರ ಕುಟುಂಬದ ಸದಸ್ಯರ ಮೇಲೆ ನಿಗಾವಣೆ ಮಾಡಲಾಗುವುದು ಎಂದು ಡಿಎಚ್‌ಒ ಡಾ.ಎಂ.ಸಿ.ರವಿ ವಿಜಯವಾಣಿಗೆ ತಿಳಿಸಿದ್ದಾರೆ.
ಆದರೆ ಮೃತ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಚಾಮರಾಜನಗರ, ಬೆಂಗಳೂರು, ಹಾರೋಹಳ್ಳಿ, ಮೈಸೂರು ಸೇರಿ ಇತರೆಡೆಗಳ ಜನರು ಭಾಗವಹಿಸಿರುವುದು ಆತಂಕ ಹೆಚ್ಚಿಸಲು ಕಾರಣವಾಗಿದೆ. ಮೃತರ ಮನೆಯ ಬೀದಿಯನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಿ ಸ್ಯಾನಿಟೈಸ್ ಮಾಡಲಾಗಿದೆ.