ತಿಂಗಳಿಗೊಮ್ಮೆ ಚಾಲಕರು ಆರೋಗ್ಯ ತಪಾಸಣೆ ಮಾಡಿಸಿ: ನಾಗರಾಜ್ ಆಚಾರ್

MDK06
Published on

ಮಡಿಕೇರಿ: ತಿಂಗಳಿಗೊಮ್ಮೆ ಚಾಲಕರು ಆರೋಗ್ಯ ತಪಾಸಣೆ ಮಾಡಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗರಾಜ್ ಆಚಾರ್ ಸಲಹೆ ನೀಡಿದರು.


ಮಡಿಕೇರಿ ರೋಟರಿ ವುಡ್ಸ್ ಮತ್ತು ಭಾರತೀಯ ರೆಡ್ ಕ್ರಾಸ್‌ನ ಕೊಡಗು ಘಟಕದ ಸಹಯೋಗದಲ್ಲಿ ನಗರದ ರೆಡ್ ಕ್ರಾಸ್ ಭವನದಲ್ಲಿ ಆಟೋ ಚಾಲಕರು ಹಾಗೂ ಮಾಲೀಕರಾಗಿ ಶನಿವಾರ ಆಯೋಜಿಸಿದ್ದ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ದಿನದಲ್ಲಿ ಹತ್ತರಿಂದ ಹನ್ನೆರಡು ಗಂಟೆ ದುಡಿಯುವ ಆಟೋ ಚಾಲಕರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ದೈಹಿಕ ಚಟುವಟಿಕೆಗಳೂ ಈ ಸಂದರ್ಭದಲ್ಲಿ ಅನಿವಾರ್ಯ. ಕನಿಷ್ಠ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಸೂಕ್ತ ಎಂದು ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ವಲಯ ೬ರ ಸಹಾಯಕ ಗವರ್ನರ್ ದೇವಣಿರ ತಿಲಕ್ ಪೊನ್ನಪ್ಪ, ರೋಗಪೀಡಿತರು ಮಾತ್ರ ತಪಾಸಣೆಗೆ ಒಳಗಾಗುವುದು ಎಂಬುದು ತಪ್ಪು ಅಭಿಪ್ರಾಯ. ಆಗಾಗ ಆರೋಗ್ಯ ತಪಾಸಣೆಗೆ ಒಳಗಾಗುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.


ಜಿಲ್ಲಾ ರೆಡ್ ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ ಮಾತನಾಡಿ, ಈ ರೀತಿಯ ಆರೋಗ್ಯ ತಪಾಸಣಾ ಶಿಬಿರಗಳಿಂದ ಎಲ್ಲರಿಗೂ ಅನುಕೂಲ. ವರ್ಷದಲ್ಲಿ ನಾಲ್ಕೈದು ಬಾರಿ ಈ ಶಿಬಿರ ನಡೆಯುವಂತಾಗಲಿ ಎಂದು ಹಾರೈಸಿದರು.


ರೋಟರಿ ವುಡ್ಸ್ ಅಧ್ಯಕ್ಷ ಕೆ.ವಸಂತ್ ಕುಮಾರ್, ರೋಟರಿ ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ಮಡಿಕೇರಿ ವುಡ್ಸ್ ಕಾರ್ಯದರ್ಶಿ ಹರೀಶ್ ಕಿಗ್ಗಾಲು, ಖಜಾಂಜಿ ಧನಂಜಯ ಶಾಸ್ತ್ರೀ, ರೆಡ್ ಕ್ರಾಸ್ ಕಾರ್ಯದರ್ಶಿ ಎಚ್.ಆರ್.ಮುರಳೀಧರ್, ನಿರ್ದೇಶಕರುಗಳಾದ ಉತ್ತಯ್ಯ, ಲೋಕೇಶ್ ಹಾಜರಿದ್ದರು.


ಆರೋಗ್ಯ ಶಿಬಿರದಲ್ಲಿ ರಕ್ತದೊತ್ತಡ ಪರೀಕ್ಷೆ, ಮಧುಮೇಹ ಪರೀಕ್ಷೆ, ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳ ಪರೀಕ್ಷೆ, ಚರ್ಮರೋಗ ಪರೀಕ್ಷೆ ಗಳಿಗೆ ಸಂಬಂಧಿಸಿದ ವೈದ್ಯರು, ಹೃದ್ರೋಗ ತಜ್ಞರು ಹಾಗೂ ವೈದ್ಯಕೀಯ ಸಿಬಂಧಿಗಳು ಆರೋಗ್ಯ ತಪಾಸಣೆ ನಡೆಸಿ ಪರಿಹಾರಗಳನ್ನು ಸೂಚಿಸಿದರು. ನೂರ ಇಪ್ಪತ್ತಕ್ಕೂ ಹೆಚ್ಚು ಆಟೋ ಚಾಲಕರು ಹಾಗೂ ಮಾಲೀಕರು ಕುಟುಂಬವರ್ಗದವರು ಶಿಬಿರದ ಪ್ರಯೋಜನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net