

ರಾಯಚೂರು: ನಗರದ ರಾಂಪುರನಲ್ಲಿರುವ ನಂದಿನಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಪ್ರತಿ ತಿಂಗಳು ಕೊನೆಯ ಭಾನುವಾರ ಆರೋಗ್ಯ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ಡಾ.ನರಸಿಂಹಲು ನಂದಿನಿ ಸ್ಮಾರಕ ಶಿಕ್ಷಣ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಡಾ.ಬಿ.ಮಹಾಲಿಂಗ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ನಂದಿನಿ ಕುಟುಂಬದಲ್ಲಿ 19 ಜನ ವೈದ್ಯರಿದ್ದು, ನಾವು ಜನಿಸಿದ ನೆಲದ ಜನರಿಗೆ ಸೇವೆ ಸಲ್ಲಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿ ತಿಂಗಳು ಜನರಿಗೆ ಉಚಿತ ಸೇವೆ ನೀಡಲು ನಿರ್ಧರಿಸಿದ್ದೇವೆ. ಮಾ.5ರಂದು ಬೆಳಗ್ಗೆ 11ಕ್ಕೆ ಶಿಬಿರದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
ತಿಂಗಳ ಕೊನೆಯ ಭಾನುವಾರ ನಮ್ಮ ಕುಟುಂಬದ ಎಲ್ಲ ವೈದ್ಯರು ಉಚಿತ ಸೇವೆಗೆ ಲಭ್ಯ ಇರುತ್ತಾರೆ. ಜನರಲ್ ಮೆಡಿಸಿನ್, ಕೀಲು ಮತ್ತು ಮೂಳೆ ರೋಗ, ಇಎನ್‌ಟಿ, ಚಿಕ್ಕ ಮತ್ತು ನವಜಾತ ಶಿಶುಗಳ ಆರೋಗ್ಯ, ಸ್ತ್ರೀ ರೋಗಗಳಿಗೆ ಸಂಬಂಧಿಸಿದ ತಜ್ಞ ವೈದ್ಯರು ತಪಾಸಣೆ ನಡೆಸಲಿದ್ದು, ಸ್ಥಳದಲ್ಲಿ ಕೆಲವು ತಪಾಸಣೆಗಳನ್ನು ಉಚಿತವಾಗಿ ಮಾಡಲಾಗುವುದು ಎಂದರು.
ಮಾಜಿ ಎಂಎಲ್ಸಿ ಎನ್.ಎಸ್.ಬೋಸರಾಜು ಶಿಬಿರ ಉದ್ಘಾಟಿಸಲಿದ್ದು, ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ, ಸದಸ್ಯರಾದ ಸ್ವಾತಿ ಹರಿಬಾಬು, ಮಹಾಂತೇಶ, ಮನೋರೋಗ ತಜ್ಞ ಡಾ.ವಿ.ಎ.ಮಾಲಿಪಾಟೀಲ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಡಾ.ಬಿ.ವಿರೂಪಾಕ್ಷಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಡಾ.ಬಿ.ಮಹಾಲಿಂಗ ತಿಳಿಸಿದರು. ಟ್ರಸ್ಟ್ ಪದಾಧಿಕಾರಿಗಳಾದ ನರಸಣ್ಣ, ಶಾಂತರೆಡ್ಡಿ, ಡಾ.ವಿಜಯಕುಮಾರ ಕಟ್ಟಿಮನಿ, ಉಪನ್ಯಾಸಕ ವಿಜಯರಾಜೇಂದ್ರ ಉಪಸ್ಥಿತರಿದ್ದರು.