

ಮೈಸೂರು: ರೋಟರಿ ಮೈಸೂರು ವೆಸ್ಟ್ ಸಹಯೋಗದಲ್ಲಿ ನರೆಡ್ಕೊ ಫೌಂಡೇಷನ್ ವತಿಯಿಂದ ಮೇ 19 ರಂದು ಬೆಳಗ್ಗೆ 8 ಗಂಟೆಗೆ ಸರಸ್ವತಿಪುರಂನ ರೋಟರಿ ಕ್ಲಬ್ ಸಭಾಂಗಣದಲ್ಲಿ ಕಟ್ಟಡ ಕಾರ್ಮಿಕರಿಗೆ ‘ಕಾರ್ಮಿಕ ಕಾರ್ಡ್ ನೋಂದಣಿ’ ಮತ್ತು ‘ಉಚಿತ ಆರೋಗ್ಯ ತಪಾಸಣೆ ಶಿಬಿರ’ ಆಯೋಜಿಸಲಾಗಿದೆ ಎಂದು ಆಯೋಜಕ ವಿ.ಸಿ.ರವಿಕುಮಾರ್ ತಿಳಿಸಿದರು.
ಕಟ್ಟಡ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವುದು ನಮ್ಮ ಮುಖ್ಯ ಉದ್ದೇಶ. ಶಿಬಿರದಲ್ಲಿ ಕಣ್ಣು, ದಂತ, ಮಧುಮೇಹ ಮತ್ತು ಹೃದಯ ತಜ್ಞರು, ಆಯುರ್ವೇದ ವೈದ್ಯರು ಉಪಸ್ಥಿತರಿದ್ದು, ತಪಾಸಣೆ ನಡೆಸುವರು. ರಾಜ್ಯದ ಕಾರ್ಮಿಕರು ಆಧಾರ್ ಪ್ರತಿಯೊಂದಿಗೆ ಆಗಮಿಸಿದರೆ, ಕಾರ್ಮಿಕ ಕಾರ್ಡ್ ಮಾಡಿಕೊಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೋಟರಿ ಮೈಸೂರು ವೆಸ್ಟ್ ಅಧ್ಯಕ್ಷ ಸುಧೀಂದ್ರ ಮಾತನಾಡಿ, ನರೆಡ್ಕೊ ನಡೆಸುತ್ತಿರುವ ಸಾಮಾಜಿಕ ಕಾರ್ಯಕ್ಕೆ ರೋಟರಿ ಸಂಪೂರ್ಣ ಸಹಕಾರ ನೀಡಲಿದೆ. ಶಿಬಿರದಲ್ಲಿ ರೋಟರಿ ಮತ್ತು ನರಡ್ಕೊ ಸದಸ್ಯರು ರಕ್ತದಾನವನ್ನೂ ಮಾಡಲಿದ್ದಾರೆ ಎಂದರು.
ಆಯೋಜಕರಾದ ಡಿ.ಜಿ.ಆದಿಶೇಷನ್ ಗೌಡ, ಎಂ.ಡಿ.ರಾಘವೇಂದ್ರ ಪ್ರಸಾದ್, ಎಂ.ಎಲ್. ನಾಗೇಶ್, ಜಿ.ಕೆ.ಸುಧೀಂದ್ರ ಜೇಸುದಾಸ್ ಇತರರಿದ್ದರು.