

ಮಂಡ್ಯ: ಗಾಳಿ, ಮಳೆ, ಬಿಸಿಲು, ಚಳಿ ಎನ್ನದೆ, ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು ಹಾಗೂ ಸ್ವಚ್ಛತಾ ರೂವಾರಿಗಳು. ಜಿಲ್ಲೆಯಲ್ಲಿ ಪೌರ ಕಾರ್ಮಿಕರ ಸೇವೆ ಅತ್ಯಮೂಲ್ಯ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ ತಿಳಿಸಿದರು.
ನಗರದ ನಗರಸಭೆ ಕಚೇರಿ ಸಭಾಂಗಣದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಸಮುದಾಯ ವೈದ್ಯಶಾಸ್ತ್ರ ವಿಭಾಗ, ವಿಕಸನ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಪೌರ ಕಾರ್ಮಿಕರಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ದೈನಂದಿನ ಜೀವನದಲ್ಲಿ ನಮ್ಮ ದೇಹದಲ್ಲಿ ಆಗುವ ಅನೇಕ ಅಡ್ಡ ಪರಿಣಾಮಗಳ ಕಡೆ ಹೆಚ್ಚಿನ ಗಮನಹರಿಸಬೇಕು. ಇಲ್ಲದಿದ್ದರೆ ಅನೇಕ ಕಾಯಿಲೆಗೆ ತುತ್ತಾಗಬಹುದು. ಆದ್ದರಿಂದ ಆರೋಗ್ಯದ ಕಡೆ ಎಲ್ಲರೂ ಗಮನ ಹರಿಸಿ ಎಂದರು.
ವಿಕಸನ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಮಹೇಶ್‌ಚಂದ್ರ ಗುರು ಮಾತನಾಡಿ, ಕಾರ್ಮಿಕರು ಜಗತ್ತಿನ ಆಸ್ತಿ. ಅವರಿಲ್ಲದ ಜಗತ್ತನ್ನು ಊಹಿಸುವುದಕ್ಕೇ ಸಾಧ್ಯವಿಲ್ಲ. ಇಂತಹ ಶ್ರಮಜೀವಿಗಳನ್ನು ಗೌರವಿಸುವ, ಅವರ ಸೇವೆಯನ್ನು ಸ್ಮರಿಸುವ ದಿನವಾಗಿ ಪ್ರತಿವರ್ಷ ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ ಎಂದರು.
ಜಿಲ್ಲಾ ಆರೋಗ್ಯ ಕುಟುಂಬ ಇಲಾಖೆ ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್ಕುಮಾರ್ ಮಾತನಾಡಿ, ಪ್ರತಿಯೊಬ್ಬ ಪೌರ ಕಾರ್ಮಿಕರು ಆರೋಗ್ಯದಿಂದಿರಬೇಕು. ಆದ್ದರಿಂದ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಹಾಗೆಯೇ ಮುಂದಿನ ದಿನಗಳಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ ಎಂದರು.
ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಸಂಸ್ಥೆ ಸಹಾಯಕ ಪ್ರಾಧ್ಯಾಪಕ ಡಾ.ವಿಜಯ್ ಹೂಗಾರ್ ಮಾತನಾಡಿ, ಮಾನಸಿಕ ಮತ್ತು ದೈಹಿಕ ಆರೋಗ್ಯ ಎರಡು ಸಹ ಪ್ರತಿಯೊಬ್ಬ ಮನುಷ್ಯನಿಗೆ ಅಗತ್ಯ. ಅದರಲ್ಲಿಯೂ ಸಹ ಪೌರ ಕಾರ್ಮಿಕರಿಗೆ ಈ ಅರೋಗ್ಯ ತಪಾಸಣಾ ಶಿಬಿರ ಬಹು ಮುಖ್ಯವಾಗಿದೆ. ಇಂತಹ ಕಾರ್ಯಕ್ರಮಗಳನ್ನು ನಮ್ಮ ವೈದ್ಯಕೀಯ ಮಹಾವಿದ್ಯಾಲಯ ನಡೆಸಿಕೊಂಡು ಬಂದಿದೆ ಎಂದರು.
ನಗರಸಭೆ ಎಇಇ ರುದ್ರೇಗೌಡ, ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಶ್ರೀನಿವಾಸ್, ಪೌರ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ನಾಗರಾಜು ಇತರರಿದ್ದರು. ಇದೇ ವೇಳೆ 150ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.