

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಆರೋಗ್ಯವಂತ ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದುವ ಜತೆಗೆ ಸಂಕಷ್ಟದಲ್ಲಿದ್ದವರ ಜೀವ ಉಳಿಸಿದ ಪುಣ್ಯ ಲಭಿಸಲಿದೆ ಎಂದು ವಿದ್ಯಾಸ್ಫೂರ್ತಿ ಇಂಟರ್ ನ್ಯಾಷನಲ್ ಅಕಾಡೆಮಿ ಅಧ್ಯಕ್ಷ ಟಿ. ಉಮಾಶಂಕರ್ ತಿಳಿಸಿದರು.
ದಾಬಸ್‌ಪೇಟೆ ಚಂದನಹೊಸಹಳ್ಳಿಯ ವಿದ್ಯಾಸ್ಫೂರ್ತಿ ಇಂಟರ್ ನ್ಯಾಷನಲ್ ಅಕಾಡೆಮಿಯಲ್ಲಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆ, ನೆಲಮಂಗಲ, ಸೋಂಪುರ ರೋಟರಿ ಸಂಸ್ಥೆ, ನೆಲಮಂಗಲ ತಾಲೂಕು ಔಷಧ ವ್ಯಾಪಾರಿಗಳ ಸಂಘ, ನೆಲಮಂಗಲ ಇನ್ನರ್‌ವೀಲ್ ಕ್ಲಬ್ ಸಹಯೋಗದಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ರಕ್ತದಾನ ಮಾಡಿದ ವ್ಯಕ್ತಿಯ ದೇಹದಲ್ಲಿ 24 ಗಂಟೆಯೊಳಗೆ ಹೊಸ ರಕ್ತ ಕಣ ಉತ್ಪತ್ತಿಯಾಗುತ್ತದೆ. ಆದ್ದರಿಂದ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದರು.
ರೋಟರಿ ಸಂಸ್ಥೆ ಸೋಂಪುರ ಘಟಕದ ಅಧ್ಯಕ್ಷ ರೋ. ಟಿ. ಚನ್ನತಿಮ್ಮಯ್ಯ ಮಾತನಾಡಿ, ಪ್ರತಿಯೊಬ್ಬರೂ ಆರೋಗ್ಯ ಕಾಳಜಿ ಬೆಳೆಸಿಕೊಳ್ಳಬೇಕು. ಪ್ರತಿದಿನ ವ್ಯಾಯಾಮ, ಯೋಗ ಮಾಡಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಸೋಂಪುರ ರೋಟರಿ ಕಮ್ಯೂನಿಟಿ ಸರ್ವೀಸ್ ನಿರ್ದೇಶಕ ಪಿ.ಜಿ.ದೇವರಾಜು ಮಾತನಾಡಿ, ಈ ಹಿಂದೆ ವಾಂತಿ, ಭೇದಿ, ಟೈಫಾಯಿಡ್, ಕ್ಷಯ, ಕಾಲರದಂತಹ ರೋಗಗಳು ಸಾಮಾನ್ಯವಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆ ಸಾಮಾನ್ಯ ಎಂಬಂತಾಗಿದ್ದು, ಉತ್ತಮ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
67 ಯೂನಿಟ್ ರಕ್ತದಾನ ಸಂಗ್ರಹವಾಯಿತು. 689 ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಈ ಪೈಕಿ 289 ಮಂದಿ ಕಣ್ಣಿನ ಪರೀಕ್ಷೆ, 183 ಮಂದಿ ದಂತ ಪರೀಕ್ಷೆ ಹಾಗೂ 61 ಮಂದಿ ಸ್ತನ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಂಡರು.
ರೋಟರಿ ಸಂಸ್ಥೆ ನೆಲಮಂಗಲ ಘಟಕದ ಅಧ್ಯಕ್ಷ ರೋ.ಎಂ.ಟಿ.ನವೀನ್ ಕುಮಾರ, ಕಾರ್ಯದರ್ಶಿ ಸಿ.ಎ. ಶಿವರಾಮಯ್ಯ, ಕಮ್ಯೂನಿಟಿ ಸವೀಸ್‌ನ ಡಿ.ಎಂ. ಮಂಜುನಾಥ, ಹೆಲ್ತ್ ಚೇರಮನ್ ಸೋಮಶೇಖರ, ಸೋಂಪುರ ರೋಟರಿ ಕಾರ್ಯದರ್ಶಿ ಬಿ.ಜಿ.ಹರೀಶ, ನೆಲಮಂಗಲ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಾದಿರಾಜ್, ಎಂ.ಎಸ್.ರಾಮಯ್ಯ ಆಸ್ಪತ್ರೆ ವೈದ್ಯ ಡಾ.ಲಕ್ಷ್ಮೀನಾರಾಯಣ್, ವಕೀಲ ಗುಂಡೇನಹಳ್ಳಿ ಯುವರಾಜ ಇದ್ದರು.