

ಬಸವಾಪಟ್ಟಣ: ಇಂದಿನ ದಿನಮಾನಗಳಲ್ಲಿ ಒತ್ತಡದ ಬದುಕಿನಿಂದ ಬಹಳಷ್ಟು ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹಾಗಾಗಿ, ಪ್ರತಿಯೊಬ್ಬರೂ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ದಾವಣಗೆರೆ ಎಸ್‌ಎಸ್ ಆಸ್ಪತ್ರೆ ಮೇಲ್ವಿಚಾರಕಿ ಮೊಹಲ ವೀಣಾ ತಿಳಿಸಿದರು.
ಸಮೀಪದ ಕೆರೆಬಿಳಿಚಿ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಮತ್ತು ಸ್ವಾಸ್ಥ ಕೇಂದ್ರದ ವತಿಯಿಂದ ಆಯುಷ್ಮಾನ್‌ಭವ ಯೋಜನೆಯಡಿ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಯುಷ್ಮಾನ್‌ಭವ ಯೋಜನೆಡಿ ಆರೋಗ್ಯಕ್ಕಾಗಿ ಅನೇಕ ಸೌಲಭ್ಯಗಳಿವೆ. ಈ ಯೋಜನೆಯನ್ನು ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಂತರ ತಜ್ಞರಿಂದ ಆರೋಗ್ಯ ತಪಾಸಣೆ ನಡೆಯಿತು. ದಾವಣಗೆರೆ ಎಸ್‌ಎಸ್ ಆಸ್ಪತ್ರೆ ತಜ್ಞ ವೈದ್ಯರಾದ ಡಾ. ವೀರೇಶ್‌ಕುಮಾರ್, ಡಾ. ಮಧು, ಡಾ. ಶೈಲರಾಣಿ, ಡಾ. ವರುಣ್, ಡಾ. ಜಿವಾಲಿ, ಡಾ. ಶ್ರುತಿ ರೋಗಿಗಳ ತಪಾಸಣೆ ನಡೆಸಿದರು.
ಸಮಾಜ ಸೇವಕ ಹೈದರ್ ಅಲಿಖಾನ್, ನಿವೃತ್ತ ತಹಸೀಲ್ದಾರ್ ಎಜಾಜ್ ಬೇಗ್, ಅಸ್ಲಾಂ ಪಾಷಾ, ಮಹಮ್ಮದ್ ಶಮಿವುಲ್ಲಾ, ಆನಂದಪ್ಪ, ಕುಮಾರಸ್ವಾಮಿ ಮತ್ತಿತರರಿದ್ದರು.