

ಮೈಸೂರು: ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರದ ಕುಂಚಿಟಿಗರ ಸಂಘದ ಆಲಮ್ಮ ಛತ್ರದಲ್ಲಿ ಸೋಮವಾರ ವಿ.ಆರ್. ಟ್ರಸ್ಟ್‌ನಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಶ್ರೀರಾಮ ತಾರಕ ಹೋಮ ಆಯೋಜಿಸಲಾಗಿತ್ತು.
ಟ್ರಸ್ ಸಂಸ್ಥಾಪಕ ಅಧ್ಯಕ್ಷರೂ ಕಾಂಗ್ರೆಸ್ ಮುಖಂಡ ಡಾ. ಶುಶ್ರುತ್‌ಗೌಡ ಅವರ ನೇತೃತ್ವದಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆ ಶಿಬಿರ ನಡೆಯಿತು. ಈ ವೇಳೆ ಮಾತನಾಡಿ ಡಾ.ಶುಶ್ರುತ್‌ಗೌಡ ಅವರು, ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಎಲ್ಲೆಡೆ ಪ್ರಸಾದ ಹಂಚಿಕೆ, ವಿಶೇಷ ಪೂಜೆ ಮೊದಲಾದವು ನಡೆಯುತ್ತಿವೆ. ಆದರೆ ನಾವು ಜನತೆಗೆ ಉಪಯುಕ್ತವಾಗುವ ರೀತಿಯಲ್ಲಿ ಈ ಆರೋಗ್ಯ ಶಿಬಿರ ಕಾರ್ಯಕ್ರಮ ಆಯೋಜಿಸಿರುವುದಾಗಿ ತಿಳಿಸಿದರು.
ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ ಮೊದಲಾದ ಸಮಸ್ಯೆಗಳಿಗೆ ತಜ್ಞ ವೈದ್ಯರಿಂದ ಉಚಿತ ತಪಾಸಣೆ ಮತ್ತು ಸಲಹೆ ಸೌಲಭ್ಯ ಕಲ್ಪಿಸಲಾಗಿತ್ತಲ್ಲದೆ, ಸಾವಿರಕ್ಕೂ ಹೆಚ್ಚು ಜನ ಪ್ರಯೋಜನ ಪಡೆದರು. ಇದೇ ವೇಳೆ ಎಲ್ಲರ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಂಡು ವರ್ಷವಿಡೀ ಆರೋಗ್ಯದ ಮೇಲೆ ನಿಗಾ ಇರಿಸಿ, ಸೂಕ್ತ ಸಲಹೆ, ಸೂಚನೆ ನೀಡಲಾಗುವುದು ಎಂದು ತಿಳಿಸಲಾಯಿತು.
ಜಿಲ್ಲಾ ಅರ್ಚಕರ ಮತ್ತು ಪುರೋಹಿತರ ಸಂಘದ ಸಹಯೋಗದಲ್ಲಿ ಶ್ರೀರಾಮ ತಾರಕ ಹೋಮ ಸಹಾ ಆಯೋಜಿಸಲಾಗಿತ್ತು. ಬಳಿಕ ಟ್ರಸ್ಟ್ ಹೊರತಂದಿರುವ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಆಯೋಧ್ಯೆ ಶ್ರೀರಾಮಲಲ್ಲಾ ಪ್ರತಿಷ್ಠಾಪನೆ ದೃಶ್ಯವನ್ನು ಎಲ್‌ಇಡಿ ಪರದೆಯಲ್ಲಿ ನೇರ ಪ್ರಸಾರ ಮಾಡಲಾಯಿತು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಮೇಯರ್ ಮೋದಾಮಣಿ, ಕಾಂಗ್ರೆಸ್ ಮುಖಂಡ ಪ್ರದೀಪ್‌ಕುಮಾರ್, ವಿಷ್ಣುಪ್ರಿಯ, ಮಾದೇಗೌಡ, ಬಸವರಾಜು, ಲತಾಮೋಹನ್ ಇತರರು ಇದ್ದರು.