

ಲಕ್ಷ್ಮೇಶ್ವರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು. ಪಿಡಿಒ ಜಿ.ಎಂ. ರೋಣದ ಮಾತನಾಡಿ, ಆರೋಗ್ಯ ಸಂಪತ್ತು ಎಲ್ಲಕ್ಕಿಂತ ದೊಡ್ಡದು. ಗ್ರಾಮದ ನರೇಗಾ ಕೂಲಿಕಾರರು ಆರೋಗ್ಯದ ಮಹತ್ವವನ್ನು ಅರಿತುಕೊಂಡು ಕೆಲಸದಲ್ಲಿ ತೊಡಗಬೇಕು. ಕೂಲಿ ಕಾರ್ಮಿಕರು ತಾವು ಮಾಡಿದ ಕೆಲಸದ ಸರಿಯಾದ ಅಳತೆಯ ಪ್ರಮಾಣ ದಾಖಲಿಸಿ ನರೇಗಾದ ಸದುಪಯೋಗ ಪಡೆದುಕೊಳ್ಳಬೇಕು. ನರೇಗಾ ಯೋಜನೆಯಲ್ಲಿ ಕೂಲಿಯ ಮೊತ್ತ ಹೆಚ್ಚಳವಾಗಿದ್ದು ವೈಯಕ್ತಿಕವಾಗಿ ಕಾಮಗಾರಿಗಳಿಗೆ ನಮೂನೆ 6 ಅರ್ಜಿ ನೀಡಬೇಕು. ಕೂಲಿಯ ಮೊತ್ತವನ್ನು 370 ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ತಿಳಿಸಿದರು. ವೈದ್ಯಧಿಕಾರಿ ಡಾ.ಮರಿಗೌಡರ್ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಸಲಹೆ-ಸೂಚನೆ ನೀಡಿದರು. ಗ್ರಾಪಂ ಅಧ್ಯಕ್ಷರಾದ ಶಂಕ್ರಪ್ಪ ಶಿರನಹಳ್ಳಿ, ಆರೋಗ್ಯ ಇಲಾಖೆ ಸಿಬ್ಬಂದಿ, ಬಿಎಫ್‌ಟಿ ಕೆ.ಎ. ನದಾಫ್, ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಾಯಕಬಂಧುಗಳು ಹಾಜರಿದ್ದರು.