

ತಿ.ನರಸೀಪುರ: ತಾಲೂಕಿನ ಕುಪ್ಯ ಗ್ರಾಮದಲ್ಲಿ ಗುರುವಾರ ಕೆಎಂಎಫ್, ಮೈಮುಲ್ ಮಾಜಿ ನಿರ್ದೇಶಕ ಹಾಗೂ ಜಿಪಂ ಮಾಜಿ ಅಧ್ಯಕ್ಷ ಕೆ.ಸಿ.ಬಲರಾಂ ಅವರ 4ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಣ್ಣಿನ ಉಚಿತ ತಪಾಸಣೆ ಹಾಗೂ ಆರೋಗ್ಯ ತಪಾಸಣೆ ಶಿಬಿರದಲ್ಲಿ ನೂರಾರು ಜನರು ಭಾಗವಹಿಸಿದ್ದರು.
ಹಿರಿಯ ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಶಿಬಿರಕ್ಕೆ ಚಾಲನೆ ನೀಡಿದರು. ಭೈರವೇಶ್ವರ ನೇತ್ರಾಲಯ, ಬನ್ನೂರು ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವತಿಯಿಂದ ಆರೋಗ್ಯ ತಪಾಸಣೆ, ದೃತಿ ಡಯಗೋಸ್ಟಿಕ್ ಸೆಂಟರ್ ವತಿಯಿಂದ ಸಕ್ಕರೆ ಕಾಯಿಲೆ ಉಚಿತ ತಪಾಸಣೆ ಹಾಗೂ ಖ್ಯಾತ ವೈದ್ಯ, ಸ್ತ್ರೀ ರೋಗ ತಜ್ಞ ಡಾ.ಕೆ.ಟಿ.ಚೈತನ್ಯ ಅವರಿಂದ ಆರೋಗ್ಯ ತಪಾಸಣೆ ನಡೆಯಿತು.
ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಪ್ಯ ಪುಟ್ಟಸ್ವಾಮಿ ಮಾತನಾಡಿ, ಈ ಭಾಗದಲ್ಲಿ ಸುದೀರ್ಘ ಅವಧಿಗೆ ಸ್ಥಳೀಯ ಜನಪ್ರತಿನಿಧಿಯಾಗಿದ್ದ ಕೆ.ಸಿ.ಬಲರಾಂ ಅವರ ಕಾಳಜಿಯಿಂದ ನಮ್ಮೂರು ಸಮಗ್ರವಾಗಿ ಅಭಿವೃದ್ಧಿ ಕಂಡಿದೆ. ಸರ್ಕಾರಿ ಶಾಲೆಗಳಿಗೆ ಸೂಕ್ತವಾದ ಕಟ್ಟಡಗಳು ಲಭ್ಯವಾಗಿವೆ. ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಬಲರಾಂ ಅವರ ಅಕಾಲಿಕ ಮರಣ ಸ್ಥಳೀಯ ರಾಜಕಾರಣ ಹಾಗೂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸ್ಮರಿಸಿದರು.
ಡೇರಿ ಅಧ್ಯಕ್ಷ, ಬಲರಾಂ ಪುತ್ರ ಕೆ.ಬಿ.ಪ್ರಭಾಕರ್, ಪುತ್ರಿ ಕೆ.ಬಿ.ವಿಮಲಾ, ನೇತ್ರ ತಜ್ಞ ವೈದ್ಯೆ ಡಾ.ಚಂದನಾ, ಶ್ರೀ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಭಾಗ್ಯಮ್ಮ, ಗ್ರಾಪಂ ಅಧ್ಯಕ್ಷ ಗವಿ, ಸದಸ್ಯ ಗೋವಿಂದ, ನೀರು ಬಳಕೆದಾರ ಸಂಘದ ಅಧ್ಯಕ್ಷ ಜೆ.ಮಹದೇವ್, ಕಾರ್ಯದರ್ಶಿ ರಾಜು, ಮಾಜಿ ಅಧ್ಯಕ್ಷ ಶಿವರಾಮು, ಮುಖಂಡರಾದ ಡೇರಿ ವಿಶ್ವ, ಬಿಲಿಗೆರೆಹುಂಡಿ ಮಂಜು, ಸೋಮಶೇಖರ್, ಪುಟ್ಟಸ್ವಾಮಿ, ಎಸ್.ಎಸ್.ಕೆ. ನವೀನ್, ಬೊಮ್ಮನಾಯಕನಹಳ್ಳಿ, ಕೂಸಪ್ಪ ಇದ್ದರು.