

ಮೈಸೂರು: ನಗರದ ತಿ.ನರಸೀಪುರ ರಸ್ತೆಯ ರಿಂಗ್ ರೋಡ್ ಡಾಕ್ಟರ್ಸ್ ಸಮುದಾಯ ಭವನ ಬಳಿ ಇರುವ ಯುರೋ ಕಿಡ್ಸ್ ಶಾಲೆಯ ಆವರಣದಲ್ಲಿ ಶನಿವಾರ ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಲಯನ್ಸ್ ಕ್ಲಬ್ ಆಫ್ ಮೈಸೂರು ಕ್ಯಾಪಿಟಲ್, ಯುರೋ ಕಿಡ್ಸ್, ನಾರಾಯಣ ಹೃದಯಾಲಯ ಹಾಗೂ ಡಾ.ನಂದೀಶ್ ಕಿಡ್ಸ್ ಕ್ಲಿನಿಕ್ ನಿಂದ ಆಯೋಜಿಸಿದ್ದ ಶಿಬಿರದಲ್ಲಿ ನೂರಾರು ಮಕ್ಕಳು ಮತ್ತು ಹಿರಿಯರಿಗಾಗಿ ಉಚಿತ ಆರೋಗ್ಯ ತಪಾಸಣೆ ನೆರವೇರಿಸಲಾಯಿತು. ಈ ಶಿಬಿರದಲ್ಲಿ ಇಸಿಜಿ, ಬಿಪಿ, ಸಕ್ಕರೆ ಕಾಯಿಲೆ, ಕಣ್ಣು, ದಂತಪರೀಕ್ಷೆ, ತಜ್ಞ ವೈದ್ಯರಿಂದ ಸಲಹೆ ನೀಡಲಾಯಿತು.
ಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಎನ್.ಸುಬ್ರಹ್ಮಣ್ಯ ಶಿಬಿರಕ್ಕೆ ಚಾಲನೆ ನೀಡಿ, ಇಂದಿನ ದಿನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹು ಮುಖ್ಯ. ಜೀವನ ಶೈಲಿಯ ಜತೆಗೆ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಯಾವುದೇ ರೋಗವನ್ನು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿದರೆ ಗುಣಪಡಿಸಲು ಸಹಕಾರಿಯಾಗುತ್ತದೆ ಎಂದರು.
ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯು ಅನೇಕ ಸಾಮಾಜಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಬರುತ್ತಿದೆ. ಆರೋಗ್ಯದಂತ ಶಿಬಿರಗಳನ್ನು ಹೆಚ್ಚು ಗಮನ ಹರಿಸುವ ಮೂಲಕ ಬಡಾವಣೆ ಜನರಿಗೆ ಆರೋಗ್ಯ ಜಾಗೃತಿ ಮೂಡಿಸುವುದು ಉತ್ತಮ ಕಾರ್ಯವಾಗಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದರು.
ಲಯನ್ಸ್ ಕ್ಯಾಪಿಟಲ್ ಸಂಸ್ಥೆ ಅಧ್ಯಕ್ಷ ಎಂ.ಪ್ರಕಾಶ್, ಕಾರ್ಯದರ್ಶಿ ಪ್ರಭುಸ್ವಾಮಿ, ಯುರೋ ಕಿಡ್ಸ್‌ನ ಕೃಷ್ಣೇಗೌಡ ಹಾಗಲಹಳ್ಳಿ, ಶಿಲ್ಪಾ ಕೃಷ್ಣೇಗೌಡ, ಚೈತ್ರಾ, ಜೀವನ್ ಪ್ರಕಾಶ್ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರೂ ಆದ ಕ್ಯಾಪಿಟಲ್ ಲಯನ್ಸ್ ಸಂಸ್ಥೆ ಖಜಾಂಚಿ ಎಂ.ಸಿದ್ದೇಗೌಡ, ಲಯನ್ಸ್ ವಲಯ ಅಧ್ಯಕ್ಷ ಮನು, ಲಯನ್ಸ್ ಜಿಲ್ಲಾ ಅತಿಥಿ ಉಮಾಶಂಕರ್, ಡಾ.ನಂದೀಶ್, ನಾರಾಯಣ ಆಸ್ಪತ್ರೆಯ ವೈದ್ಯರು ಸೇರಿದಂತೆ ಇತರರು ಇದ್ದರು.