ಆಶ್ರಮ ಶಾಲಾ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ

18
Published on

ಮೈಸೂರು: ಹೊಸ ವರ್ಷದಲ್ಲಿ ಆಶ್ರಮ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಕೆ.ಆರ್. ರಾಜ್‌ಕುಮಾರ್ ತಿಳಿಸಿದರು.

ಕೇರಳ ರಾಜ್ಯದ ಕೋಯಿಕ್ಕೋಡ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಬುಡಕಟ್ಟು ಕಲಾ ಪ್ರಕಾರಗಳಲ್ಲಿ ಭಾಗವಹಿಸಲು ತೆರಳುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಬುಡಕಟ್ಟು ಸಮುದಾಯದವರಿಗೆ ನಗರಈ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಬೀಳ್ಗೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆಯಲ್ಲಿ ಭಾಗವಹಿಸುವವರಿಗೆ ಪರಿಕರಗಳು ಹಾಗೂ ಡ್ಯಾನ್ಸ್‌ಡ್ರೆಸ್ ಖರೀದಿಸಲು ಸಹಾಯಧನ ನೀಡಲಾಗುವುದು. ನಮ್ಮ ಸಂಸ್ಥೆಯ ಮೂಲಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು. ಹಾಡಿ ಮಹಿಳೆಯರಿಗೆ ಒಂದು ದಿನದ ಕಾರ್ಯಾಗಾರವನ್ನು ನಡೆಸುವುದರ ಜತೆಗೆ ಶಿಕ್ಷಣ ಆರೋಗ್ಯದ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಒಟ್ಟಾರೆಯಾಗಿ ಸರ್ಕಾರದಿಂದ ಆದಿವಾಸಿ ಬುಡಕಟ್ಟು ಸಮುದಾಯದ ಜನರಿಗೆ ದೊರೆಯುವ ಸವಲತ್ತುಗಳನ್ನು ತಲುಪಿಸುವುದರ ಜತೆಗೆ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಸಂಸ್ಥೆ ಉಪನಿರ್ದೇಶಕಿ ಪ್ರಭಾ ಅರಸ್, ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸಿದ್ದಲಿಂಗಸ್ವಾಮಿ, ಸಿಬ್ಬಂದಿ ಅರುಣ್‌ಪ್ರಭು, ಬಿ.ಆರ್. ಭವ್ಯಾ, ಗುಣಧರ್, ವಿಜಯ್‌ಕುಮಾರ್, ಸಿದ್ದು, ರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net