

ಕೂಡ್ಲಿಗಿ: ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೌಲಭ್ಯ ಕಲ್ಪಿಸಲು ಮುಂದಿನ ದಿನಗಳಲ್ಲಿ ಬೃಹತ್ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ತಾಯಕನಹಳ್ಳಿ ಗ್ರಾಮದ ಶ್ರೀ ಕನಕ ವಿದ್ಯಾಕೇಂದ್ರದಲ್ಲಿ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಅವರ ಸ್ಮರಣಾರ್ಥ ತುಮಕೂರಿನ ಅಕ್ಷರ ಐ ಫೌಂಡೇಷನ್, ಹೊಸಪೇಟೆಯ ನೇತ್ರಲಕ್ಷ್ಮೀ ವೈದ್ಯಾಲಯ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಹಾಗೂ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ರೋಗಮುಕ್ತ ಜೀವನ ನಡೆಸಲು ಮುಂಜಾಗ್ರತಾ ಕ್ರಮ ಅನುಸರಿಸುವುದು ಮುಖ್ಯವಾಗಿದೆ. ಕಾಯಿಲೆಗಳು ದೇಹ ಪ್ರವೇಶಿಸುವುದು ಕೆಲವರಿಗೆ ಗೊತ್ತಾಗಿರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. 40 ವರ್ಷ ಮೇಲ್ಪಟ್ಟವರು ಇಸಿಜಿ ಮಾಡಿಸಿಕೊಳ್ಳಬೇಕು ಎಂದರು.
ನಮ್ಮ ತಂದೆ ಮಾಜಿ ಶಾಸಕ ದಿ.ಎನ್.ಟಿ.ಬೊಮ್ಮಣ್ಣ ಅವರ ಸ್ಮರಣಾರ್ಥ ಕ್ಷೇತ್ರದ ಗಡಿ ಗ್ರಾಮಗಳಿಗೆ ಅನುಕೂಲವಾಗುವಂತೆ ತಾಯಕನಹಳ್ಳಿ ಗ್ರಾಮದಲ್ಲಿ ಶಿಬಿರ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಕಟ್ಟಕಡೆ ವ್ಯಕ್ತಿಗೂ ಆರೋಗ್ಯ ತಪಾಸಣೆ ಹಾಗೂ ಅಗತ್ಯ ಔಷಧೋಪಚಾರ ನೀಡಲಾಗುವುದು ಎಂದು ತಿಳಿಸಿದರು.
16 ತಜ್ಞ ವೈದ್ಯರ ತಂಡ 2,730 ಜನರ ಆರೋಗ್ಯ ತಪಾಸಣೆ ನಡೆಸಿ, 270 ಜನರ ಕಣ್ಣು, 196 ಜನರ ಹೃದಯ ಮತ್ತು ಇತರ ಕಾಯಿಲೆಗಳ ತಪಾಸಣೆ ಮಾಡಿಸಿದರು. ಡಾ.ಪುಷ್ಪಾ ಎನ್.ಟಿ.ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರದೀಪ್, ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ, ಉಪಾಧ್ಯಕ್ಷ ಮಾಡ್ಲಾಕನಹಳ್ಳಿ ಕೆ. ಮಹಾದೇವಪ್ಪ, ಹುಡೇಂ ಪಿಎಚ್‌ಸಿಯ ಡಾ.ಸಂದೀಪ್, ಗ್ರಾಪಂ ಅಧ್ಯಕ್ಷೆ ಪ್ಯಾರಿಮಾಬಿ ಘನಿಸಾಬ್, ಪಿಎಲ್‌ಡಿ ಬ್ಯಾಂಕ್ ಸದಸ್ಯ ಕೆ.ಮೂರ್ತೆಪ್ಪ, ಕೃ.ಪ.ಸ.ಸಂಘದ ಅಧ್ಯಕ್ಷ ಮಹಾಂತೇಶ, ಗುರು ಕನಕ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಮಂಜಣ್ಣ ಇನ್ನಿತರರಿದ್ದರು.