

ಚಿಕ್ಕಮಗಳೂರು: ಕೇವಲ ಮುಸಲ್ಮಾನ್ ಸಮುದಾಯದವರಿಗೆ ಮಾತ್ರವಲ್ಲದೆ ಎಲ್ಲ ವರ್ಗದವರಿಗೂ ಅನುಕೂಲವಾಗುವಂತೆ ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ಹೆಲ್ತ್ ಸೆಂಟರ್ ಅರಂಭಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಹಜರತ್ ಟಿಪ್ಪೂ ಸುಲ್ತಾನ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಇಮ್ತಿಯಾಜ್ ಅಲಿಖಾನ್ ತಿಳಿಸಿದರು.
ನಗರದ ಅಂಡೆಛತ್ರದ ಬಳಿಯಿರುವ ಸಂಘದ ಕಟ್ಟಡದಲ್ಲಿ ಕರ್ನಾಟಕ ರಾಜ್ಯ ಹಜರತ್ ಟಿಪ್ಪೂ ಸುಲ್ತಾಲ್ ಚಾರಿಟಬಲ್ ಟ್ರಸ್ಟ್ ಮತ್ತು ಚಿಕ್ಕಮಗಳೂರು ಜಿಲ್ಲಾ ಹಜರತ್ ಟಿಪ್ಪೂ ಸುಲ್ತಾನ್ ಹೆಲ್ತ್ಕೇರ್‌ನಿಂದ ಆರಂಭಿಸಲಾದ ಉಚಿತ ಆರೊಗ್ಯ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಉಚಿತ ಆರೋಗ್ಯ ಕೇಂದ್ರ ಪ್ರತಿದಿನ ಬೆಳಗ್ಗೆ ೧೦ಗಂಟೆಯಿAದ ಮಧ್ಯಾಹ್ನ ೧ಗಂಟೆವರೆಗೆ, ಮಧ್ಯಾಹ್ನ ೨ರಿಂದ ಸಂಜೆ ೬ ಗಂಟೆವರೆಗೆ ಕಾರ್ಯನಿರ್ವಹಿಸಲಿದ್ದು, ಡಾ. ಉಮೇಸಲ್ಮಾಖಾನ್ ಆರೋಗ್ಯ ತಪಾಸಣೆ ಮತ್ತು ಉಚಿತ ಚಿಕಿತ್ಸೆ ನೀಡಲಿದ್ದಾರೆ ಎಂದು ತಿಳಿಸಿದರು.
ಈ ಆರೋಗ್ಯ ಕೇಂದ್ರದಲ್ಲಿ ಮೂಳೆ, ಗಂಟಲು, ಮಕ್ಕಳ ಕಾಯಿಲೆ, ಜ್ವರ, ಕೆಮ್ಮು, ಚರ್ಮ ರೋಗ, ವಯಸ್ಕರ ನರ ದೌರ್ಬಲ್ಯ, ಉಚಿತ ನೇತ್ರ ಪರೀಕ್ಷೆ ಜೊತೆಗೆ ಇನ್ನಿತರೆ ರೋಗಗಳ ಬಗ್ಗೆ ತಪಾಸಣೆ ನಡೆಯಲಿದೆ. ಕಳೆದ ೧೨ ವರ್ಷಗಳಿಂದ ಟಿಪ್ಪೂ ಸುಲ್ತಾನ್ ಅಭಿಮಾನಿಗಳ ಬಳಗ ಸಮಾಜಮುಖಿ ಕೆಲಸ ಮಾಡುತ್ತಿದ್ದು, ಅದರ ಮುಂದುವರಿದ ಭಾಗ ಉಚಿತ ಆರೋಗ್ಯ ಕೇಂದ್ರವಾಗಿದೆ ಎಂದು ಮಾಹಿತಿ ನೀಡಿದರು.
ಹಜರತ್ ಟಿಪ್ಪೂ ಸುಲ್ತಾನ್ ಅಭಿಮಾನಿಗಳ ಬಳಗ ಹಿಂದೂ, ಮುಸಲ್ಮಾನರ ನಡುವೆ ಕೋಮು ಸೌಹಾರ್ದತೆ ಮೂಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಹತ್ತು ಹಲವು ಹೋರಾಟ ಮತ್ತು ಚಳುವಳಿಗಳಲ್ಲಿ ತೊಡಗಿಸಿಕೊಂಡು ಜಿಲ್ಲೆಯ ಹಿಂದೂ-ಮುಸಲ್ಮಾನರ ನಡುವಿನ ಸಾಮರಸ್ಯಕ್ಕೆ ವೇದಿಕೆಯಾಗಿ ಕೆಲಸ ಮಾಡುತ್ತಿದೆ ಎಂದರು.
ಹಜರತ್ ಟಿಪ್ಪೂ ಸುಲ್ತಾನ್ ಸೇವಾ ಟ್ರಸ್ಟ್ ಮೂಲಕ ಅತ್ಯಂತ ಹಿಂದುಳಿದ ಬಡವರಿಗೆ ಉಚಿತ ಆರೋಗ್ಯ ಸೇವೆಯನ್ನು ಒದಗಿಸುವುದರ ಜೊತೆಗೆ ಹಿಂದುಳಿದ ಬಡ ಮಕ್ಕಳಿಗೆ ಶೈಕ್ಷಣಿಕ ಅಭಿವೃದ್ಧಿಗೆ ಸಹಾಯ ನೀಡಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಪ್ರತಿಭಾನ್ವಿತ ಬಡ ಮಕ್ಕಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹವನ್ನೂ ನೀಡಲಾಗುವುದು. ಪ್ರತಿ ವರ್ಷ ಉಚಿತ ನೇತ್ರ ಪರೀಕ್ಷೆ, ರಕ್ತದಾನ ಹಾಗೂ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಪ್ರವಾಹ ಪೀಡಿತ ಕುಟುಂಬಗಳಿಗೆ ಆಹಾರದ ಕಿಟ್ ಹಾಗೂ ಆರ್ಥಿಕ ನೆರವನ್ನು ಟ್ರಸ್ಟ್ ನೀಡುತ್ತಿದೆ ಎಂದು ತಿಳಿಸಿದರು.
ಉಚಿತ ಆರೋಗ್ಯ ಕೇಂದ್ರಕ್ಕೆ ಮಸೀದಿಯ ಗುರುಗಳಾದ ಮುಫ್ತಿ ಮುಹೇಬ್ ರಜಾ ಚಾಲನೆ ನೀಡಿದರು. ಟಿಪ್ಪೂ ಸುಲ್ತಾನ್ ಸೇವಾ ಟ್ರಸ್ಟ್ನ ಉಪಾಧ್ಯಕ್ಷ ಆಸಿಫ್, ಕಾರ್ಯದರ್ಶಿ ಅಬ್ರಾರ್, ಸಹ ಕಾರ್ಯದರ್ಶಿ ಸಾದಿಕ್, ಖಜಾಂಚಿ ಸೈಯದ್ ಅಬೀದ್ ಉಪಸ್ಥಿತರಿದ್ದರು.