

ಚನ್ನಗಿರಿ: ತಾಲೂಕು ಬಸವಾಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಸಮರ್ಪಕವಾಗಿ ವೈದ್ಯಕೀಯ ಸೇವೆ ಸಿಗುತ್ತಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸೋಮವಾರ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಜೆ.ಸಜ್ಜಿನ್ ಮಾತನಾಡಿ, ಸರ್ಕಾರ ಸಾರ್ವಜನಿಕರ ಆರೋಗ್ಯ ಸುಧಾರಿಸಲು 24 ಗಂಟೆ ಸೇವೆ ನೀಡಲು ಆದೇಶಿಸಿದೆ. ಆದರೆ, ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಸೇವೆ ಸಿಗದೆ ಪಟ್ಟಣ, ನಗರ ಪ್ರದೇಶದ ಆಸ್ಪತ್ರೆಗೆ ಹೋಗುವಂತಾಗಿದೆ. ಸೇವೆಯೇ ಸಿಗದ ಮೇಲೆ ಗ್ರಾಮದಲ್ಲಿ ಏಕೆ ಇರಬೇಕು ಎಂದು ಪ್ರಶ್ನಿಸಿದರು.
ಚಿರಡೋಣಿ, ಕಂಸಾಗರ, ಕಂಚುಗಾರನಹಳ್ಳಿ, ದಾಗಿನಕಟ್ಟೆ, ಕಣಿವೆಬಿಳಚಿ, ನಿಲೋಗಲ್ಲು ಮತ್ತಿತರ 15ಕ್ಕೂ ಹೆಚ್ಚಿನ ಗ್ರಾಮಗಳಿಂದ 150ಕ್ಕೂ ಅಧಿಕ ಜನರು ಚಿಕಿತ್ಸೆ ಪಡೆಯಲು ಆಗಮಿಸುತ್ತಾರೆ. ಚಿಕಿತ್ಸೆ ಸಿಕ್ಕರೆ, ಔಷಧ ಸಿಗುವುದಿಲ್ಲ. ಔಷದ ಸಿಕ್ಕರೆ ವೈದ್ಯರು, ಸಿಬ್ಬಂದಿ ಸಿಗುವುದಿಲ್ಲ ಎಂದು ದೂರಿದರು.
ಗ್ರಾಮದ ಸಾಕಷ್ಟು ಜನರು ಸರ್ಕಾರಿ ಆಸ್ಪತ್ರೆ ನಂಬಿಕೊಂಡಿದ್ದಾರೆ. ಹೆರಿಗೆಗೆ ಬಂದರೆ ಸೌಲಭ್ಯ ಸಿಗುವುದಿಲ್ಲ. ಶುಶ್ರೂಷಕ ಅಧಿಕಾರಿ ಸಂಜೆ ನಂತರ ರೋಗಿಗಳನ್ನು ನೋಡುವುದಿಲ್ಲ. ಮೇಲಧಿಕಾರಿಗಳಿಗೆ ತಿಳಿಸಿದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಷಣ್ಮುಖಪ್ಪ ಮಾತನಾಡಿ, ಆರೋಗ್ಯ ಇಲಾಖೆ ಒಬ್ಬರು ವೈದ್ಯರನ್ನು ನೇಮಿಸಿದೆ. ಒಬ್ಬ ವೈದ್ಯ 24 ತಾಸೂ ಸೇವೆ ನೀಡಲು ಆಗುವುದಿಲ್ಲ. ತುರ್ತುಸೇವೆ ಇದ್ದರೆ ನೋಡುತ್ತಾರೆ. ಶುಶ್ರೂಷಕ ಅಧಿಕಾರಿ ಮೇಲೆ ದೂರು ಬಂದಿದೆ. ನೋಟಿಸ್ ನೀಡಲಾಗಿದೆ. ಮುಂದಿನ ಕ್ರಮ ಜರುಗಿಸುತ್ತೇನೆ ಎಂದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್, ಮಾಜಿ ಉಪಾಧ್ಯಕ್ಷ ರಫೀಕ್, ಮುಖಂಡರಾದ ವಿಜಯಕುಮಾರ್, ಬಸವರಾಜ್, ರಾಜಣ್ಣ, ತಾಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ್ ಇತರರಿದ್ದರು.