

ಚಿಕ್ಕಮಗಳೂರು: ಕರೊನಾ ಲಸಿಕೆ ಪಡೆಯಲು ಜಿಲ್ಲೆಯ 10 ಸಾವಿರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ನೋಂದಣಿ ಮಾಡಿಸಿದ್ದು, ಇದಕ್ಕಾಗಿ 108 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ಹೇಳಿದರು.
ಜಿಲ್ಲಾಸ್ಪತ್ರೆ ಆವರಣದಲ್ಲಿ ಶುಕ್ರವಾರ ಕರೊನಾ ಲಸಿಕೆ ಡ್ರೖೆರನ್ (ಪೂರ್ವಾಭ್ಯಾಸ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ 6 ಸ್ಥಳಗಳಲ್ಲಿ ಡ್ರೖೆರನ್ ಲಸಿಕಾ ಕೇಂದ್ರ ಸ್ಥಾಪಿಸಲಾಗಿದೆ. ಕರೊನಾ ಲಸಿಕೆ ಬರುವ ಪೂರ್ವದಲ್ಲಿ ಯಾವೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು? ಲಸಿಕೆ ಬಂದ ನಂತರ ಲೋಪವಿಲ್ಲದೆ ಯೋಜನೆ ಕಾರ್ಯಗತಗೊಳಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರ ತಂಡ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು? ಎಂಬುದಕ್ಕೆ ಮಾದರಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಈ ವಾರದಲ್ಲಿ ಲಸಿಕೆ ಬರುವ ನಿರೀಕ್ಷೆಯಿದೆ. ಬಂದ ನಂತರ ಪ್ರತಿ ಕೇಂದ್ರದಲ್ಲಿ ತಲಾ 100 ಜನರಂತೆ ಒಂದೆರಡು ದಿನಗಳಲ್ಲಿ 10 ಸಾವಿರ ಮಂದಿಗೆ ಲಸಿಕೆ ಹಾಕಲು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಕೆ.ಭರತ್ಕುಮಾರ್ ಮಾತನಾಡಿ, ಜಿಲ್ಲಾಸ್ಪತ್ರೆ, ನಗರ ಆರೋಗ್ಯ ಕೇಂದ್ರ, ಹೋಲಿಕ್ರಾಸ್ ಆಸ್ಪತ್ರೆ, ಮೂಡಿಗೆರೆ ತಾಲೂಕು ಆಸ್ಪತ್ರೆ, ಅಜ್ಜಂಪುರ ಸಮುದಾಯ ಆರೋಗ್ಯ ಕೇಂದ್ರ, ಹುಲಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೖೆರನ್ ಮಾಡಲಾಗಿದೆ. ಸದ್ಯದಲ್ಲೇ ಕರೊನಾ ಲಸಿಕೆ ಬರುತ್ತಿದ್ದು, ತಂತ್ರಾಂಶ ಬಳಸಿ ವ್ಯಾಕ್ಸಿನ್ ನೀಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.