

ಲಿಂಗದಹಳ್ಳಿ: ಮಲ್ಲೇನಹಳ್ಳಿ, ಆಳೂರು, ದೊಡ್ಡ ಲಿಂಗದಹಳ್ಳಿ. ಹುಲಿತಿಮ್ಮಾಪುರ, ಮುಂತಾದ ಗ್ರಾಮಗಳ ಗ್ರಾಮಸ್ಥರ ಅನುಕೂಲಕ್ಕಾಗಿ ಮಲ್ಲೇನಹಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಯಿಂದ 65 ಲಕ್ಷ ರೂ. ಅನುದಾನದಲ್ಲಿ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು ಮುಂದಿನ 4 ತಿಂಗಳ ಒಳಗೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು,
ಮಲ್ಲೇನಹಳ್ಳಿ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದ ಗ್ರಾಮಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈ ಕೇಂದ್ರಗಳ ಮೂಲಕ ಗ್ರಾಮಸ್ಥರಿಗೆ ಆಯಾ ಆಯಾ ಗ್ರಾಮಗಳ ಸಮೀಪವೇ ಅಗತ್ಯ ಪ್ರಾಥಮಿಕ ಚಿಕಿತ್ಸೆಗಳು ಲಭ್ಯವಾಗಲಿದೆ. ಆರೋಗ್ಯ ಕೇಂದ್ರಕ್ಕೆ ಜಾಗ ನೀಡಿದ ಮುಖಂಡ ಜನಾರ್ಧನ ಕಾರ್ಯ ಶ್ಲಾಘನೀಯ ಎಂದರು.
ಲಿಂಗದಹಳ್ಳಿ ಗ್ರಾಪಂ ಸದಸ್ಯ ಎಂ.ಆರ್. ಧನಂಜಯ ಮಾತನಾಡಿ, ಲಿಂಗದಹಳ್ಳಿ ಪಿಎಚ್‌ಸಿಯಲ್ಲಿ ಕಳೆದ ಅನೇಕ ತಿಂಗಳುಗಳಿಂದ ಕಾಯಂ ವೈದ್ಯರಿಲ್ಲದೇ ಚಿಕಿತ್ಸೆಗೆ ತೊಂದರೆಯಾಗುತ್ತಿದ್ದು ಕೂಡಲೇ ಕಾಯಂ ವೈದ್ಯರನ್ನು ನೇಮಿಸಬೇಕು. ಮತ್ತು ಹುಲಿತಿಮ್ಮಾಪುರ, ಜಮ್ಮಾಪುರ, ಸಿದ್ದರಹಳ್ಳಿ, ಗ್ರಾಮಗಳ ವ್ಯಾಪ್ತಿಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣಕ್ಕೆ ಅನುದಾನ ಹಾಗೂ ಎಂಸಿಆರ್‌ಪಿ ಕಾಲನಿಯಲ್ಲಿನ ಒಂದು ಮುಖ್ಯ ಬೀದಿಯ ಸಿಸಿ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ಒತ್ತಾಯಿಸಿದರು.
ತಾಲೂಕು ಆರೋಗ್ಯಾಧಿಕಾರಿ ಚಂದ್ರಶೇಖರ್, ತಾಪಂ ಮಾಜಿ ಅಧ್ಯಕ್ಷ ಬಿ.ಆರ್.ರವಿ, ಗ್ರಾಪಂ ಮಾಜಿ ಅಧ್ಯಕ್ಷ ಎಲ್.ಎನ್.ಲಿಂಗರಾಜು, ಗ್ರಾಪಂ ಸದಸ್ಯರಾದ ಎಂ.ಕೆ.ಚಂದ್ರಪ್ಪ, ಎಂ.ಆರ್.ಧನಂಜಯ, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ರಾಮಪ್ಪ, ಕೆ.ಎಸ್.ಪರಮೇಶ್ವರಪ್ಪ, ವೆಂಕಟರಮಣಗೌಡ, ಗುತ್ತಿಗೆದಾರ ಲೋಕೇಶಪ್ಪ ಇದ್ದರು.