

ಸಿದ್ದಾಪುರ : ಆಧುನಿಕ ಕಾಲಘಟ್ಟದ ಜೀವನದಲ್ಲಿ ಸಮತೋಲನ ಆಹಾರ ಸೇವನೆ ಮತ್ತು ಕ್ರಮಬದ್ಧ ವ್ಯಾಯಮದೊಂದಿಗೆ
ಹೃದಯದ ಆರೋಗ್ಯ ಪಾಲನೆಗೆ ಮಹತ್ವ ನೀಡಿ ಎಂದು ತಜ್ಞ ಡಾ. ತೇಜಸ್ ಸಲಹೆ ನೀಡಿದರು.
ಪಟ್ಟಣದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ದಿವಂಗತ ಡಾ.ಪೂಣಚ್ಚ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ರೋಗಗಳ ಜಾಗೃತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಲವರು ಬಿಡುವಿಲ್ಲದ ಕೆಲಸಗಳ ಒತ್ತಡದಿಂದ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದರ ಪರಿಣಾಮ ದೇಶದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ದ್ವಿಗುಣಗೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆಧುನಿಕ ಜೀವನ ಶೈಲಿಯಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಹಲವರು ಆಹಾರ ಸೇವನೆ ಮಾಡುತ್ತಿಲ್ಲ. ಹಾಗಾಗಿ ಆರೋಗ್ಯದಲ್ಲಿ ಸಮತೋಲನ ಕಳೆದುಕೊಳ್ಳುತ್ತಿದ್ದಾರೆ. ವಾಹನ ಬಳಕೆ ಹೆಚ್ಚಾಗಿ ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ಕ್ರಮಬದ್ಧ ವ್ಯಾಯಾಮ ಮತ್ತು ವಿಶ್ರಾಂತಿಗಳಿಗೂ ಸಮಯ ನೀಡದ ಕಾರಣ ವಿವಿಧ ಕಾಯಿಲೆಗಳು ಎರಗುತ್ತಿರುವುದು ಸಹಜವೇ ಆಗಿದೆ ಎಂದು ಡಾ. ತೇಜಸ್ ಹೇಳಿದರು.
ಕ್ಯಾನ್ಸರ್ ಕುರಿತು ಉಪನ್ಯಾಸ ನೀಡಿದ ಡಾ.ಮಾಧುರಿ, ದೇಹದ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯೇ ಕ್ಯಾನ್ಸರ್. ಇದು ನಮ್ಮ ದೇಹದ ಯಾವುದೇ ಭಾಗದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೂ ಪ್ರಾರಂಭಿಕ ಹಂತದಲ್ಲಿ ಈ ರೋಗವನ್ನು ಗುಣಪಡಿಸಬಹುದಾಗಿದೆ. ರೋಗಿಗಳು ಧೈರ್ಯದಿಂದ ಇರಬೇಕು ಎಂದರು.