ಹಣ, ಆಸ್ತಿಗಿಂತ ಆರೋಗ್ಯ ಸಂಪಾದನೆ ಮುಖ್ಯ

03 HRS 01
???????
Published on

ಹಿರೀಸಾವೆ: ಸದಾ ಕೃಷಿ ಚಟುವಟಿಕೆಯಲ್ಲಿ ತೊಡಗುವ ಗ್ರಾಮೀಣ ಭಾಗದ ಜನತೆ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನಹರಿಸುತ್ತಿಲ್ಲ ಎಂದು ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಹರ್ಷಿತ್ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಆದಿಚುಂಚನಗಿರಿ ಆಸ್ಪತ್ರೆ, ಹಾಸನ ಜಿಲ್ಲಾಡಳಿತ ಅಂಧತ್ವ ನಿವಾರಣಾ ಸಂಸ್ಥೆ, ಹಿರೀಸಾವೆ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ರೈತ ವರ್ಗವು ಕೃಷಿ ಚಟುವಟಿಕೆ ನಡುವೆಯೂ ಬಿಡುವು ಮಾಡಿಕೊಂಡು ವರ್ಷದಲ್ಲಿ 2 ರಿಂದ 3 ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಹಣ, ಆಸ್ತಿಗಿಂತ ಆರೋಗ್ಯ ಸಂಪಾದನೆ ಅತಿಮುಖ್ಯ. ಅದೆಷ್ಟೇ ಸಂಪಾದಿಸಿದರೂ ಆರೋಗ್ಯವೇ ಸರಿ ಇಲ್ಲದ ಮೇಲೆ ಯಾವುದೇ ಪ್ರಯೋಜನವಿಲ್ಲ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಈ.ಬೋರಣ್ಣ ಮಾತನಾಡಿ, ಇತ್ತೀಚಿನ ದಿನಗಳಿಂದ ಜಿಲ್ಲೆ ಹಾಗೂ ತಾಲೂಕಿನಲ್ಲಿ ಡೆಂೆ ಮಹಾಮಾರಿ ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ. ಆದ್ದರಿಂದ ಸಾರ್ವಜನಿಕರು ಸ್ವಚ್ಛತೆ ಕಡೆ ಗಮನಹರಿಸಬೇಕು. ಗ್ರಾಮ ಪಂಚಾಯಿತಿ ವತಿಯಿಂದ ಪಟ್ಟಣದಲ್ಲಿ ಈಗಾಗಲೇ ಚರಂಡಿ ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡುತಿದ್ದು, ಸ್ವಚ್ಛತೆ ಕಾಪಾಡಲು ನಿವಾಸಿಗಳ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ಹೃದ್ರೋಗ, ನರರೋಗ, ಮಧುಮೇಹ, ಕ್ಯಾನ್ಸರ್, ಕೀಲು ಮೂಳೆ ಹಾಗೂ ಚರ್ಮ ರೋಗ ಸೇರಿದಂತೆ ಹಲವು ರೋಗಗಳ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡುವುದರ ಜತೆಗೆ ಉಚಿತವಾಗಿ ಔಷಧಗಳನ್ನು ವಿತರಣೆ ಮಾಡಲಾಯಿತು. 415ಕ್ಕೂ ಹೆಚ್ಚು ಮಂದಿ ತಪಾಸಣೆ ಮಾಡಿಸಿಕೊಂಡರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಮ್ಮ, ಮಾಜಿ ಅಧ್ಯಕ್ಷ ಮಹೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಕುಮಾರ್, ಉಪ ತಹಸೀಲ್ದಾರ್ ತೇಜಸ್ವಿನಿ, ಆರ್‌ಐ ಯೋಗೇಶ್, ಪಿಡಿಒ ಸತೀಶ್, ವೈದ್ಯರಾದ ಡಾ.ಕವಿತಾ, ಡಾ.ಗಿರೀಶ್, ಡಾ.ಮದನ್, ಮುಖಂಡರಾದ ವೆಂಕಟೇಶ್, ಬೋರೇಗೌಡ, ಲೋಕೇಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net