ಮಳೆಗಾಲದಲ್ಲಿ ಇರಲಿ ಆರೋಗ್ಯ ಕಾಳಜಿ

mosquitore
Published on

ಅವಿನಾಶ್ ಜೈನಹಳ್ಳಿ ಮೈಸೂರು
ಜಿಲ್ಲೆಯಲ್ಲಿ ಎರಡು ದಿನಗಳಿಂದ ಮುಂಗಾರು ಮಳೆ ಕೊಂಚ ಚುರುಕು ಪಡೆದಿದ್ದು, ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ.

ಮಳೆಗಾಲದಲ್ಲಿ ನೀರು, ತೇವಾಂಶ ಮತ್ತು ಗಾಳಿಯಲ್ಲಿ ಸಾವಿರಾರು ಬಗೆಯ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳು ತೇಲಿಬರುವ ಸಾಧ್ಯತೆ ಇದ್ದು, ನಾನಾ ಕಾಯಿಲೆಗಳಿಗೆ ತುತ್ತಾಗುವ ಸಂಭವ ಇರುತ್ತದೆ. ಆದ್ದರಿಂದ ನಾಗರಿಕರು ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಮಳೆಗಾಲದಲ್ಲಿ ಸಾಮಾನ್ಯವಾಗಿ ಕೆಮ್ಮು, ಶೀತ, ನೆಗಡಿ ಕಾಣಿಸಿಕೊಳ್ಳುತ್ತವೆ. ಜತೆಗೆ ಡೆಂೆ, ಚಿಕೂನ್‌ಗುನ್ಯಾ, ಮಲೇರಿಯಾ, ಅತಿಸಾರ, ಟೈಫಾಯಿಡ್, ವೈರಲ್‌ಜ್ವರ, ಕಾಲರಾ ಇನ್ನಿತರ ಕಾಯಿಲೆಗಳ ಬಗ್ಗೆ ಸದಾ ಮುನ್ನೆಚ್ಚರಿಕೆ ವಹಿಸಬೇಕು. ಆರಂಭದಲ್ಲಿ ಜ್ವರವಷ್ಟೇ ಕಾಣಿಸಿಕೊಂಡರೂ ಜತೆಯಲ್ಲೇ ಕಾಯಿಲೆಯ ಇತರ ನಿರ್ದಿಷ್ಟ ಗುಣಲಕ್ಷಣ ಇರುತ್ತವೆ. ಸೂಕ್ತ ಆರೈಕೆ ಮತ್ತು ಕಾಳಜಿಯ ಕೊರತೆಯಿಂದ ಮಳೆಗಾಲದ ಕೆಲ ಕಾಯಿಲೆಗಳು ಮಾರಕವಾಗಿ ಪರಿಣಮಿಸಬಹುದು. ಆದ್ದರಿಂದ ಮಕ್ಕಳಾದಿಯಾಗಿ ವಯಸ್ಸಾದವರೂ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

ಡೆಂಘೆ
ಟೈಗರ್ ಮಾಸ್ಕಿಟೋ ಅಥವಾ ಹುಲಿ ಸೊಳ್ಳೆಯ ಕಡಿತದಿಂದ ಈ ಸಮಸ್ಯೆ ಸಾಮಾನ್ಯವಾಗಿ ಎದುರಾಗುತ್ತದೆ. ಡೆಂಘೆ ಜ್ವರದ ಲಕ್ಷಣಗಳೆಂದರೆ ತೀವ್ರತರದ ಜ್ವರ, ಕಡಿಮೆ ಪ್ಲೇಟ್‌ಲೆಟ್ ಎಣಿಕೆ, ಸೊಳ್ಳೆ ಕಡಿದ ಭಾಗದಲ್ಲಿ ದದ್ದುಗಳು, ತ್ವಚೆ ಅತಿ ಸಂವೇದಿಯಾಗುವುದು. ಈ ಸೊಳ್ಳೆ ನಿಮ್ಮ ಕೆಲಸದ ಕೇಂದ್ರ ಅಥವಾ ಮನೆಗೆ ಪ್ರವೇಶಿಸದಂತೆ ತಡೆಯಲು ಸೊಳ್ಳೆ ನಿವಾರಕಗಳು ಮತ್ತು ಸಿಟ್ರೊನೆಲ್ಲಾದಂತಹ ಕೀಟ ನಿವಾರಕ ಸಸ್ಯಗಳನ್ನು ಬಳಸುವುದು ಒಳ್ಳೆಯದು. ನಿಮ್ಮ ಇಡೀ ದೇಹವನ್ನು ಆವರಿಸುವ ಬಟ್ಟೆಗಳನ್ನು ಧರಿಸುವುದು ಸಹ ಉಪಯುಕ್ತವಾದ ಕ್ರಮವಾಗಿದೆ. ಸೊಳ್ಳೆ ಪರದೆ ಬಳಸಿ ಮಲಗುವುದು ಉತ್ತಮ.
ಚಿಕೂನ್‌ಗುನ್ಯಾ
ಚಿಕೂನ್‌ಗುನ್ಯಾ ಮುಖ್ಯವಾಗಿ ಹವಾನಿಯಂತ್ರಣಗಳು, ಕೂಲರ್‌ಗಳು, ಸಸ್ಯಗಳು, ಪಾತ್ರೆಗಳು, ನೀರಿನ ಕೊಳವೆಗಳಲ್ಲಿ ಕಂಡುಬರುವ, ನಿಂತಿರುವ ನೀರಿನಲ್ಲಿ ಜನಿಸಿದ ಸೊಳ್ಳೆಗಳಿಂದ ಉಂಟಾಗುತ್ತದೆ. ಈಡಿಸ್ ಅಲ್ಬೋಪಿಕ್ಟಸ್ ಎಂಬ ಪ್ರಜಾತಿಯ ಸೊಳ್ಳೆಗಳ ಕಚ್ಚುವಿಕೆಯ ಮೂಲಕ ಈ ರೋಗ ಹರಡುತ್ತದೆ. ಮೂಳೆಸಂಧುಗಳಲ್ಲಿ ನೋವು ಮತ್ತು ಜ್ವರ ಚಿಕೂನ್‌ಗುನ್ಯಾದ ಎರಡು ಸಾಮಾನ್ಯ ಲಕ್ಷಣಗಳಾಗಿವೆ. ನೀರು ನಿಂತಿರುವ ಯಾವುದೇ ಮೇಲ್ಮೈ ಅಥವಾ ಪಾತ್ರೆಗಳನ್ನು ತೆರವುಗೊಳಿಸುವುದು ಮತ್ತು ಕೀಟ ನಿವಾರಕ ಬಳಸಬೇಕು.
ಮಲೇರಿಯಾ
ಹೆಣ್ಣು ಅನಾಫಿಲಿಸ್ ಸೊಳ್ಳೆಯ ಕಡಿತದಿಂದ ಮಲೇರಿಯಾ ರೋಗ ಉಂಟಾಗುತ್ತದೆ. ಈ ಸೊಳ್ಳೆ ಜಲಾವೃತ ಪ್ರದೇಶಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಈ ಕಾರಣದಿಂದಾಗಿ ಮಳೆಗಾಲದಲ್ಲಿ ಮಲೇರಿಯಾ ಸಾಮಾನ್ಯವಾಗಿ ಎದುರಾಗುವ ಕಾಯಿಲೆಯಾಗಿದೆ. ಜ್ವರ, ನಡುಕ, ಸ್ನಾಯು ನೋವು ಮತ್ತು ಅತೀವ ಸುಸ್ತು ಮಲೇರಿಯಾದ ಪ್ರಮುಖ ಲಕ್ಷಣಗಳಾಗಿವೆ. ಮನೆಯಲ್ಲಿರುವ ನೀರಿನ ಟ್ಯಾಂಕ್‌ಅನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಸ್ವಚ್ಛಗೊಳಿಸಬೇಕು. ಸದ್ಯ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಒಂದೇ ಒಂದು ಮಲೇರಿಯಾ ಪ್ರಕರಣ ಪತ್ತೆಯಾಗಿಲ್ಲ ಎನ್ನುವುದು ಖುಷಿಯ ವಿಚಾರ.
ಅತಿಸಾರ
ವ್ಯಾಪಕವಾದ ಈ ಕರುಳಿನ ಕಾಯಿಲೆ ನೈರ್ಮಲ್ಯವಿಲ್ಲದ ಆಹಾರ ಮತ್ತು ನೀರಿನ ಸೇವನೆಯಿಂದ ಉಂಟಾಗುತ್ತದೆ. ತೀವ್ರ ಮತ್ತು ದೀರ್ಘಕಾಲದ ಎರಡು ರೀತಿಯ ಅತಿಸಾರವಿದೆ. ಇವೆರಡನ್ನೂ ಸರಳ ಚಿಕಿತ್ಸೆಗಳಿಂದಲೇ ನಿಭಾಯಿಸಬಹುದು. ಬಿಸಿ ನೀರನ್ನು ಕುಡಿಯುವುದು ಮತ್ತು ಮನೆಯ ಆಹಾರವನ್ನೇ ಸೇವಿಸುವುದು ಈ ರೋಗ ತಡೆಗಟ್ಟಲು ಉತ್ತಮ ಮಾರ್ಗವಾಗಿದೆ.
ಟೈಫಾಯಿಡ್
ಟೈಫಾಯಿಡ್ ಸಾಮಾನ್ಯವಾಗಿ ನೈರ್ಮಲ್ಯದ ಕೊರತೆಯಿಂದ ಉಂಟಾಗುತ್ತದೆ. ಸರಿಯಾದ ಕ್ರಮದಲ್ಲಿ ಸಂಗ್ರಹಿಸದ ಆಹಾರ ಮತ್ತು ನೀರಿನ ಬಳಕೆಯಿಂದ ಈ ರೋಗ ಬರುವ ಸಾಧ್ಯತೆ ಹೆಚ್ಚು. ಎಸ್.ಟೈಫಿ ಬ್ಯಾಕ್ಟೀರಿಯಾವೇ ಟೈಫಾಯಿಡ್‌ಗೆ ಕಾರಣವಾಗುತ್ತದೆ. ಜ್ವರ, ತಲೆನೋವು, ಅತೀವ ಸುಸ್ತು, ಮೈ-ಕೈ ನೋವು ಮತ್ತು ಗಂಟಲ ಬೇನೆ, ನುಂಗಲು ಕಷ್ಟವಾಗುವುದು ಟೈಫಾಯಿಡ್‌ನ ಕೆಲವು ಲಕ್ಷಣಗಳಾಗಿವೆ. ಎಲ್ಲ ಸಮಯದಲ್ಲೂ ಹ್ಯಾಂಡ್ ಸ್ಯಾನಿಟೈಜರ್ ಅನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವುದು, ಬೀದಿ ಬದಿ ಆಹಾರ ಸೇವನೆಯಿಂದ ದೂರವಿರಬೇಕು. ಆರೋಗ್ಯಕರ ದ್ರವಗಳನ್ನು ಕುಡಿಯಬೇಕು.
ವೈರಲ್‌ಜ್ವರ
ವೈರಲ್ ಜ್ವರ ವರ್ಷದುದ್ದಕ್ಕೂ ಎದುರಾಗುವ ಸಾಮಾನ್ಯ ಲಕ್ಷಣವಾಗಿದೆ. ಆದರೆ ಮಳೆಗಾಲದಲ್ಲಿ ಇದು ಇನ್ನೂ ಹೆಚ್ಚು ಸಾಮಾನ್ಯವಾಗಿದೆ. ತೀವ್ರ ಜ್ವರ, ಶೀತ ಮತ್ತು ಕೆಮ್ಮು ಇದರ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ. ಇದು 3-7 ದಿನಗಳವರೆಗೆ ಇರುತ್ತದೆ. ಬಳಿಕ ನಮ್ಮ ರೋಗ ನಿರೋಧಕ ಶಕ್ತಿ ಈ ವೈರಸ್‌ಗೆ ರೋಗ ರಕ್ಷಣಾ ವ್ಯವಸ್ಥೆಯನ್ನು ಪಡೆದುಕೊಳ್ಳುವ ಕಾರಣ ಈ ಜ್ವರ ತಾನಾಗಿಯೇ ಇಳಿಯುತ್ತದೆ.
ಕಾಲರಾ
ಕಲುಷಿತ ಆಹಾರ, ನೀರಿನ ಸೇವನೆಯಿಂದ ಉಂಟಾಗುವ ಮತ್ತೊಂದು ಮಳೆಗಾಲದ ಕಾಯಿಲೆ ಕಾಲರಾ. ನೈರ್ಮಲ್ಯ ಮತ್ತು ಸ್ವಚ್ಛತೆ ಕೊರತೆ ಅನೇಕ ರೋಗಗಳಿಗೆ ಕಾರಣವಾಗಬಹುದು ಮತ್ತು ಕಾಲರಾ ಅವುಗಳಲ್ಲಿ ಒಂದು. ಅತಿಯಾದ ಮಲವಿಸರ್ಜನೆ ಮತ್ತು ಸುಸ್ತು ಈ ಮಾನ್ಸೂನ್ ಕಾಯಿಲೆಯ ಸಾಮಾನ್ಯ ಲಕ್ಷಣವಾಗಿದೆ.
ಕಾಮಾಲೆ (ಜಾಂಡೀಸ್)
ಮಳೆಗಾಲದಲ್ಲಿ ಕಲುಷಿತ ನೀರು ಮತ್ತು ಈ ನೀರಿನಿಂದ ತಯಾರಿಸಿದ ಆಹಾರ ಸೇವನೆಯಿಂದ ಜಾಂಡೀಸ್ ಬರುತ್ತದೆ. ಅತಿಯಾದ ಸುಸ್ತು, ಹಳದಿ ಬಣ್ಣದ ಮೂತ್ರ, ಕಣ್ಣುಗಳು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ. ಕುದಿಸಿ ತಣಿಸಿದ ನೀರನ್ನು ಕುಡಿಯುವುದು, ಮನೆಯಲ್ಲಿ ತಯಾರಿಸಿದ ಆಹಾರಗಳನ್ನೇ ಸೇವಿಸುವುದರಿಂದ ಇದನ್ನು ತಡೆಗಟ್ಟಬಹುದು.

ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಈ ಬಗ್ಗೆ ನಮ್ಮ ಇಲಾಖೆ ವರ್ಷಪೂರ್ತಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಎಲ್ಲಿಯೂ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆಗ ಸೊಳ್ಳೆಗಳ ಸಂತಾನೋತ್ಪತ್ತಿ ತಪ್ಪಿ ಸಾಂಕ್ರಾಮಿಕ ರೋಗ ತಡೆಗಟ್ಟಬಹುದು.ಎಸ್.ಚಿದಂಬರ್ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net