

ಹಲಗೂರು: ನಾವು ವಾಸಿಸುವ ಸ್ಥಳ ಯಾವಾಗಲೂ ಸ್ವಚ್ಛತೆಯಿಂದ ಕೂಡಿರಬೇಕು. ಆಗ ಮಾತ್ರ ಯಾವುದೇ ಸಾಂಕ್ರಾಮಿಕ ರೋಗಗಳು ಹಬ್ಬುವುದಿಲ್ಲ ಎಂದು ಚರ್ಮರೋಗ ತಜ್ಞ ಡಾ.ಎಂ.ಎಲ್. ರಾಜಶೇಖರ್ ತಿಳಿಸಿದರು.
ಚನ್ನಪಟ್ಟಣ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಚರ್ಮರೋಗ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಪ್ರತಿವರ್ಷ ಆರೋಗ್ಯ ತಪಾಸಣೆ ನಡೆಸಲು ಚಿಂತಿಸಿದ್ದು, ಗ್ರಾಮೀಣ ಜನತೆ ಇದನ್ನು ಸದ್ಬಳಕೆ ಮಾಡಿಕೊಳ್ಳಿ. ಪಟ್ಟಣ ಪ್ರದೇಶಗಳಿಗೆ ಬಂದು ಹೆಚ್ಚು ಹಣ ಖರ್ಚು ಮಾಡುವುದಕ್ಕಿಂತ ಇಂಥ ಶಿಬಿರದಲ್ಲಿ ತಪಾಸಣೆ ನಡೆಸಿಕೊಳ್ಳುವುದು ಸೂಕ್ತ ಎಂದರು.
ಶಿಬಿರದಲ್ಲಿ ಚರ್ಮ ಕಾಯಿಲೆಗಳು, ಅಲರ್ಜಿ, ಮೊಡವೆ, ತೊನ್ನು, ಕೂದಲು ಉದುರುವಿಕೆ, ಉಳಕಡ್ಡಿ/ಗಜಕರ್ಣ, ವೆಸೊರಿಯಾಸಿಸ್ ಇತರ ಸಮಸ್ಯೆಗಳ ತಪಾಸಣೆ ನಡೆಸಿ ಅವರಿಗೆ ಉಚಿತವಾಗಿ ಔಷಧ ಮಾತ್ರೆಗಳನ್ನು ನೀಡಲಾಗಿದೆ. ಇತ್ತೀಚೆಗೆ ಉಳಕಡ್ಡಿ ಜಾಸ್ತಿ ಕಂಡುಬಂದಿರುತ್ತದೆ. ಮನೆಯಲ್ಲಿ ಒಬ್ಬರಿಗೆ ಬಂದರೆ ಮನೆಯಲ್ಲಿ ಇದ್ದವರಿಗೆ ಸಹ ಹರಡುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿಯೊಬ್ಬರೂ ಸ್ವಚ್ಛತೆಯಿಂದ ಇರಬೇಕು. ಉತ್ತಮ ಪರಿಸರ ಕಾಪಾಡಿಕೊಂಡು ಹಣ್ಣು ತರಕಾರಿಗಳನ್ನು ಸೇವಿಸಿ ನಿಮ್ಮ ಆರೋಗ್ಯ ವೃದ್ಧಿಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಡಾ.ಎಂ.ಎಲ್. ರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಕೆ.ಕುಮಾರ್, ಡಿ.ಎಲ್.ಮಾದೇಗೌಡ, ಶಿವರಾಜು ಕೆ.ಎಚ್.ಆರ್.ಪದ್ಮನಾಭ, ಎಚ್.ವಿ.ರಾಜು, ಪುಟ್ಟಸ್ವಾಮಿ, ಗುರುಸಿದ್ದು ಸೇರಿದಂತೆ ಸಂಸ್ಥೆಯ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.