

ಎಚ್.ಡಿ.ಕೋಟೆ: ಕ್ಯಾತನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಹಾರ್ಟ್ ಸಂಸ್ಥೆ ಮೈಸೂರು, ರೋಟರಿ ಕ್ಲಬ್ ಮೈಸೂರು ವೆಸ್ಟ್, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ನಾರಾಯಣ ಹೆಲ್ತ್, ಎಎಸ್‌ಜಿ ಕಣ್ಣಿನ ಆಸ್ಪತ್ರೆ, ಕ್ಯಾತನಹಳ್ಳಿ ಗ್ರಾಪಂ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದೊಂದಿಗೆ ಆಯೋಜಿಸಿದ್ದ ಶಿಬಿರವನ್ನು ತಹಸೀಲ್ದಾರ್ ಶ್ರೀನಿವಾಸ್ ಉದ್ಘಾಟಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರಗಳು ಅವಶ್ಯಕ. ರೈತರು, ಗ್ರಾಮಸ್ಥರು ಇಂತಹ ಶಿಬಿರಗಳಲ್ಲಿ ಪಾಲ್ಗೊಂಡರೆ ತಜ್ಞ ವೈದ್ಯರಿಂದ ಸೂಕ್ತ ಸಲಹೆ ಪಡೆದು ಆರೋಗ್ಯ ಸಮಸ್ಯೆ ನಿವಾರೊಸಿಕೊಳ್ಳಲು ಅನುಕೂಲ ಆಗಲಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಮಾತನಾಡಿ, ಹಾರ್ಟ್ ಸಂಸ್ಥೆ ವತಿಯಿಂದ ಕ್ಯಾತನಹಳ್ಳಿ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿದ್ದು ಈ ಭಾಗದ ಜನರಿಗೆ ಸಹಕಾರಿಯಗಿದೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಿ ಪ್ರಾಥಮಿಕ ಹಂತದಲ್ಲಿ ಆರೋಗ್ಯ ಸಮಸ್ಯೆಯನ್ನು ಗುರುತಿಸಿದರೆ ಅವಶ್ಯ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದರು.
ಶಿಬಿರದಲ್ಲಿ ಒಟ್ಟು 75 ಜನ ಭಾಗವಹಿಸಿದ್ದರು. ಇವರಲ್ಲಿ 45 ಜನ ಕಣ್ಣಿನ ಪರೀಕ್ಷೆ, 20 ಜನ ಶ್ವಾಸಕೋಶ ಪರೀಕ್ಷೆ, 25 ಜನ ಇಸಿಜಿ ಪರೀಕ್ಷೆ, 75 ಜನ ರಕ್ತದೊತ್ತಡ, ಮಧುಮೇಹ ಹಾಗೂ 75 ಜನ ಸಾಮಾನ್ಯ ರೋಗ ತಪಾಸಣೆ ಮಾಡಿಸಿಕೊಂಡರು.
ಮೈಸೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾದ ಕ್ಯಾತನಹಳ್ಳಿ ನಾಗರಾಜು, ನಾರಾಯಣ ಹೆಲ್ತ್ ಸಾಮಾನ್ಯ ರೋಗತಜ್ಞ ಡಾ.ಗುಲ್ಜರ್, ನಾರಾಯಣ ಹೆಲ್ತ್‌ನ ವಿನಯ್ ಮತ್ತು ತಂಡದವರು, ಎಎಸ್‌ಜಿ ಕಣ್ಣಿನ ಆಸ್ಪತ್ರೆಯ ಮಹೇಶ್ ಮತ್ತು ತಂಡದವರು, ಹಾರ್ಟ್ ಸಂಸ್ಥೆಯ ಸಂಯೋಜಕ ಶಿವಲಿಂಗ, ಸಿಪ್ಲ ಬ್ರಿತ್ ಫ್ರೀ ಸಮಿರ್ ಮತ್ತು ತಂಡದವರು ಕ್ಯಾತನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪ್ರಶಾಂತ್, ಶೀಲಾ, ಸಮುದಾಯ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯ ಕರ್ತರು ಆಸ್ಪತ್ರೆಯ ಸಿಬ್ಬಂದಿ ಇದ್ದರು.