

ಮಂಡ್ಯ: ಆರೋಗ್ಯದ ವಿಚಾರದಲ್ಲಿ ಉದಾಸೀನ ಮಾಡುವುದು ಬೇಡ. ಕಾಲಕಾಲಕ್ಕೆ ಪರೀಕ್ಷೆಗೊಳಪಡುತ್ತಿರಬೇಕು ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಸಲಹೆ ನೀಡಿದರು.
ತಾಲೂಕಿನ ಉಪ್ಪರಕನಹಳ್ಳಿ ಗ್ರಾಮದಲ್ಲಿ ಮಂಡ್ಯ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಘಟಕ, ಕೃಷಿಕ ಲಯನ್ಸ್ ಸಂಸ್ಥೆ, ಜೈನ್ ನೇತ್ರಾಲಯ ಸಹಯೋಗದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಹಾಗೂ ಕಣ್ಣಿನಪೊರೆ ಶಸ್ತ ಚಿಕಿತ್ಸೆ, ಸಕ್ಕರೆಕಾಯಿಲೆ, ಬಿಪಿ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಮನುಷ್ಯರು ಕಣ್ಣುಗಳ ಸಂರಕ್ಷಣೆ ಕಾಪಾಡಿಕೊಳ್ಳಬೇಕು. ಪ್ರಮುಖವಾಗಿ ರಕ್ತದೊತ್ತಡ, ಸಕ್ಕರೆಕಾಯಿಲೆ ಇರುವವರು ನಿಯಮಿತವಾಗಿ ಅಂಗಾಂಗ ಪರೀಕ್ಷೆ ಒಳಗಾಗಬೇಕಿದೆ. ಉದಾಸೀನ ಮಾಡಿದರೆ ಉತ್ತಮ ಅಂಗಗಳು ಸ್ವಾಧೀನ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದರು.
ಕಣ್ಣುಗಳು ಪ್ರಕೃತಿಯು ನಮನಗೆ ನೀಡಿರುವ ಅತ್ಯಮೂಲ್ಯ ಕೊಡುಗೆ. ಜತೆಗೆ ಅತ್ಯಂತ ಸೂಕ್ಷ್ಮವಾದ ಅಂಗ. ಆದ್ದರಿಂದ ಜೋಪಾನವಾಗಿ ಕಾಪಾಡಿಕೊಳ್ಳಬೇಕಿದೆ. ಭಾರತವನ್ನು ಕುರುಡರ ರಾಜಧಾನಿ ಎಂತಲೂ ಕರೆಯುತ್ತಾರೆ. ಕಾರಣ ನಮ್ಮ ದೇಶಲ್ಲಿ ಕುರುಡರ ಸಂಖ್ಯೆ 2 ಕೋಟಿಗಿಂತಲೂ ಹೆಚ್ಚಿದೆ. ಅಂಧತ್ವದ ಪ್ರಮುಖ ಕಾರಣ ಕಣ್ಣಿನ ಪೊರೆ. ಆದರೆ ಈ ಅಂಧತ್ವವನ್ನು ಸೂಕ್ತ ಚಿಕಿತ್ಸೆಯಿಂದ ನಿವಾರಿಸಬಹುದು ಎಂದು ಹೇಳಿದರು.
ನಮ್ಮ ದೇಶದಲ್ಲಿ ಶೇ.81ರಷ್ಟು ಜನರಿಗೆ ಕಣ್ಣಿನ ಪೊರೆ ಸರಾಸರಿ 55ನೇ ವರ್ಷಕ್ಕೆ ಬರುತ್ತದೆ. ಶೇ.80ರಷ್ಟಿರುವ ನಮ್ಮ ಹಳ್ಳಿಯ ಜನತೆಗೆ ಸರಿಯಾದ ವೈದ್ಯಕೀಯ ಸೌಲಭ್ಯಗಳು ಲಭ್ಯವಿಲ್ಲ. ಗ್ರಾಮೀಣ ಜನತೆ ದೂರದ ಆಸ್ಪತ್ರೆ, ಶಿಬಿರಗಳಿಗೆ ಬರುವಷ್ಟು ಸ್ಥಿತಿಯಿಲ್ಲ. ಕಣ್ಣುಬೇನೆಯ ಸಮಸ್ಯೆಗಳು ಮಕ್ಕಳಲ್ಲೂ ಕಂಡುಬರುತ್ತಿದೆ. ಆದ್ದರಿಂದ ಇಂತಹ ತಪಾಸಣೆ ಶಿಬಿರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತೇಳಿದರು.
ಮಂಡ್ಯ ವಿವಿಯ ಪ್ರೊ.ನೇತ್ರಾವತಿ, ಪ್ರೊ.ರೂಪಾದೇವಿ, ಡಾ.ಲೋಕೇಶ್, ಪ್ರೊ.ಹುಲ್ಲೇರಪ್ಪ, ಚಿಕ್ಕಸ್ವಾಮಿ, ಡಾ.ಶಿಲ್ಪಾ, ರಾಚಪ್ಪ, ಜೈನ್ ನೇತ್ರಾಲಯದ ಸಾಗರ್ ಇತರರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ 120ಕ್ಕೂ ಹೆಚ್ಚು ಜನರು ತಪಾಸಣೆಗೊಳಪಟ್ಟರು.