

ಮಂಡ್ಯ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೇಂದ್ರ ಸ್ಥಾನದ ಪತ್ರಕರ್ತರಿಗೆ ನಗರದಲ್ಲಿ ಜು.4ರಂದು ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಡಿಆರ್‌ಎಂ ಆಸ್ಪತ್ರೆಯ ಮಂಡ್ಯ ಶಾಖಾ ಮುಖ್ಯಸ್ಥ ಡಾ.ಎಂ.ಪ್ರಶಾಂತ್ ತಿಳಿಸಿದರು.
ನಗರದ ನೂರಡಿ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಆರ್‌ಎಂ ಆಸ್ಪತ್ರೆಯಲ್ಲೇ ಅಂದು ಬೆಳಗ್ಗೆ 11ಕ್ಕೆ ಶಿಬಿರ ಆರಂಭಗೊಳ್ಳಲಿದೆ. ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಆರೋಗ್ಯದಲ್ಲಿ ವ್ಯತ್ಯಾಸಗಳಾಗುವುದು ಸಹಜ. ಆದ್ದರಿಂದ ನಿಯಮಿತ ಆರೋಗ್ಯ ತಪಾಸಣೆಯಿಂದ ಮುಂದಾಗುವ ಅಪಾಯಗಳಿಂದ ಪಾರಾಗಬಹುದು. ಈ ಹಿನ್ನೆಲೆಯಲ್ಲಿ ಶಿಬಿರ ಸಂಘಟಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆಗೈದು ಜನಮಾನಸವಾಗಿರುವ ಡಿಆರ್‌ಎಂ ಆಸ್ಪತ್ರೆಯ ಮಾಲೀಕರು ಹಾಗೂ ಮೂಳೆರೋಗಗಳ ತಜ್ಞ ಡಾ.ಮಂಜುನಾಥ್ ನೇತೃತ್ವದ ವೈದ್ಯರ ತಂಡದ ಆರೋಗ್ಯ ಸೇವೆ ಪ್ರಸ್ತುತ ಸಕ್ಕರೆ ಜಿಲ್ಲೆ ಮಂಡ್ಯಕ್ಕೂ ಲಭಿಸಿದೆ. ಶಿಬಿರದಲ್ಲಿ ಹೃದ್ರೋಗ ತಜ್ಞ ಡಾ.ರಮೇಶ್, ಫಿಜಿಷಿಯನ್ ಡಾ.ಎಂ.ಪ್ರಶಾಂತ್, ಮೂತ್ರಪಿಂಡ ರೋಗ ತಜ್ಞ ಡಾ.ವಿಜಯ್ ಅವರು ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಇಕೋ ಇಸಿಜಿ ಸೇರಿದಂತೆ ಪ್ರಾಥಮಿಕ ರಕ್ತ ಪರೀಕ್ಷೆಗಳನ್ನು ಮಾಡಿ, ಸಲಹೆ ನೀಡಲಾಗುತ್ತದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ, ಮಾಜಿ ಅಧ್ಯಕ್ಷ ನವೀನ್ ಚಿಕ್ಕಮಂಡ್ಯ, ಡಿಆರ್‌ಎಂ ಆಸ್ಪತ್ರೆ ಆಡಳಿತಾಧಿಕಾರಿ ಲಾವಣ್ಯ, ವ್ಯವಸ್ಥಾಪಕ ಎಂ.ಹರೀಶ್, ಪಿಆರ್‌ಒ ಶಂಕರ್ ಹಾಜರಿದ್ದರು.