ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬೇಡಿ: ತಾಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ ಕಿವಿಮಾತು

1 (4)
Published on

ಮಳವಳ್ಳಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಕಡೆಗೆ ಗಮನಹರಿಸಬೇಕು ಎಂದು ತಾಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ ಸಲಹೆ ನೀಡಿದರು.

ತಾಲೂಕಿನ ಶೆಟ್ಟಹಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಕೆಎಚ್‌ಪಿಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನರೇಗಾ ಕೂಲಿಕಾರರ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ವಿಧವಾದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ನಿರ್ಲಕ್ಷ್ಯ ಮಾಡದೇ ಗ್ರಾಮ ಆರೋಗ್ಯ ಅಭಿಯಾನದ ಮೂಲಕ ತಪಾಸಣೆ ಮಾಡಿಸಿಕೊಳ್ಳುವುದರ ಜತೆಗೆ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.

ಕೂಲಿಕಾರರಿಗೆ ಕೆಲಸ ಕೊಡುವುದಷ್ಟೇ ಅಲ್ಲದೇ, ಕೂಲಿಕಾರರ ಆರೋಗ್ಯವನ್ನು ಕಾಪಾಡುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಗ್ರಾಮ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ತಮ್ಮ ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ವಿಶ್ವೇಶ್ವರಯ್ಯ ಎರಡನೇ ಫಿಕಪ್ ನಾಲೆಯಲ್ಲಿ ಹೂಳು ತೆಗೆಯುತ್ತಿರುವ ಪ್ರತಿಯೊಬ್ಬ ಕೂಲಿಕಾರರಿಗೆ ಬಿಪಿ, ಸಕ್ಕರೆ ಕಾಯಿಲೆ, ಹೀಮೋಗ್ಲೋಬಿನ್, ಕ್ಷಯರೋಗ ಇನ್ನಿತರ ಸಣ್ಣಪುಟ್ಟ ಕಾಯಿಲೆಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಸಹಾಯಕ ನಿರ್ದೇಶಕ ದೀಪು ಮಾತನಾಡಿ, ಬೇಸಿಗೆಯ ಕಾಲವಾಗಿರುವ ಕಾರಣ ಕೂಲಿಕಾರರ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಬೇಕಾಗಿದೆ. ಕೂಲಿಕಾರರು ತೆಗೆದುಕೊಳ್ಳುವ ಊಟ, ಅವರ ಜೀವನ ಶೈಲಿಯೂ ಮುಖ್ಯ ಎಂದರು.

ಶೆಟ್ಟಹಳ್ಳಿ ಗ್ರಾಪಂ ಪಿಡಿಒ ಸಂತೋಷ್, ತಾಲೂಕು ಐಇಸಿ ಸಂಯೋಜಕ ಎಚ್.ಸುನೀಲ್‌ಕುಮಾರ್, ಕೆಎಚ್‌ಪಿಟಿ ಸಂಯೋಜಕ ಸಚಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net