ಸೆ.9ರಂದು ಹೊಳೆನರಸೀಪುರದಲ್ಲಿ ಆರೋಗ್ಯ ಶಿಬಿರ

ಹೊಳೆನರಸೀಪುರ ಪಟ್ಟಣದ ತಾಲೂಕು ಕಚೇರಿಯಲ್ಲಿ ಬೃಹತ್ ಆರೋಗ್ಯ ಮೇಳದ ಪ್ರಯುಕ್ತ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ತಹಸಿಲ್ದಾರ್ ರೇಣು ಕುಮಾರ್ ಟಿ.ಎಚ್. ರಾಜೇಶ್, ವಿಜಯಶ್ರೀ, ಹರೀಶ್ ಸೋಮಶೇಖರ್ ಇತರರಿದ್ದರು.
ಹೊಳೆನರಸೀಪುರ ಪಟ್ಟಣದ ತಾಲೂಕು ಕಚೇರಿಯಲ್ಲಿ ಬೃಹತ್ ಆರೋಗ್ಯ ಮೇಳದ ಪ್ರಯುಕ್ತ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ತಹಸಿಲ್ದಾರ್ ರೇಣು ಕುಮಾರ್ ಟಿ.ಎಚ್. ರಾಜೇಶ್, ವಿಜಯಶ್ರೀ, ಹರೀಶ್ ಸೋಮಶೇಖರ್ ಇತರರಿದ್ದರು.
Published on

ಹೊಳೆನರಸೀಪುರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸೆಪ್ಟೆಂಬರ್ 9ರಂದು ಬೃಹತ್ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ದಂಡಾಧಿಕಾರಿ ವೈ.ಎಂ. ರೇಣುಕುಮಾರ್ ತಿಳಿಸಿದರು.

ಶನಿವಾರ ತಾಲೂಕು ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಆಡಳಿತ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಸೆಪ್ಟೆಂಬರ್ 9ರಂದು ನುರಿತ ತಜ್ಞ ವೈದ್ಯರಿಂದ ಬೃಹತ್ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ. ತಾಲೂಕಿನ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಾಗರಿಕರು ತಪ್ಪದೆ ಬಂದು ಆರೋಗ್ಯ ಪರೀಕ್ಷಿಸಿಕೊಳ್ಳಬೇಕು. ತಜ್ಞ ವೈದ್ಯರಿಂದ ಸಲಹೆ, ಸೂಚನೆಗಳನ್ನು ಪಡೆದು ಔಷಧ, ಮಾತ್ರೆಗಳನ್ನು ಬಳಸುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯ ಸಿಬ್ಬಂದಿಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಬೇಕೆಂದು ಸೂಚನೆ ನೀಡಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಎಚ್.ಎನ್. ರಾಜೇಶ್ ಮಾತನಾಡಿ, ಎಲ್ಲ ರೀತಿಯ ಸಮಸ್ಯೆಗಳಿಗೆ ಅನುಭವಿ ಫಿಜಿಷಿಯನ್ ವೈದ್ಯರಿಂದ ತಪಾಸಣೆ ಮಾಡಲಾಗುತ್ತದೆ. ಆಸ್ಪತ್ರೆಯ ಆವರಣದಲ್ಲೇ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿ ಔಷಧೋಪಚಾರ ನೀಡಲಾಗುತ್ತದೆ ಎಂದು ಹೇಳಿದರು. ಹಾಗಾಗಿ ತಾಲೂಕಿನ ಎಲ್ಲ ಸಮಸ್ಯೆ ಇರುವಂತಹ ನಾಗರಿಕರು ಖುದ್ದು ಆರೋಗ್ಯ ಶಿಬಿರಕ್ಕೆ ಹಾಜರಾಗಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಸೋಮಶೇಖರ್, ವೈದ್ಯೆ ವಿಜಯಶ್ರೀ, ಬಿಸಿಎಂ ಅಧಿಕಾರಿ ಹರೀಶ್, ಸಿಡಿಪಿಒ ಸುರೇಶ್, ಕಾರ್ಮಿಕ ಇಲಾಖೆ ಅಧಿಕಾರಿ ಯಮುನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net