ದೇಶೀಯ ಆಹಾರ ಪದ್ಧತಿಯಿಂದ ಕಾಯಿಲೆಗಳು ದೂರ ; ಸಂಸದ ಡಿ.ಕೆ.ಸುರೇಶ್ ಅಭಿಪ್ರಾಯ

21 harohally 1
Published on

ಹಾರೋಹಳ್ಳಿ: ತಂತ್ರಜ್ಞಾನ ಬೆಳೆದಂತೆಲ್ಲಾ ರೋಗ-ರುಜಿನಗಳು ಹೆಚ್ಚಾಗುತ್ತಿದ್ದು, ಜನರು ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ಕನಕಪುರ ತಾಲೂಕಿನ ಮರಳವಾಡಿಯ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯದ ಮಹೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ ಮೇಳದ ಅಧ್ಯಕ್ಷೆ ವಹಿಸಿ ಮಾತನಾಡಿದರು.

ವಿಜ್ಞಾನ ತಂತ್ರಜ್ಞಾನ ಎಷ್ಟೇ ಬೆಳೆದರೂ ಸಂಕಷ್ಟದ ದಿನಗಳನ್ನು ದೂರ ಮಾಡಲು ಸಾಧ್ಯವಾಗಿಲ್ಲ. ಕರೊನಾ ಇಡೀ ವಿಶ್ವವನ್ನೇ ಸ್ತಬ್ಧ ಮಾಡಿದ್ದು, ಅಭಿವೃದ್ಧಿ ಹೊಂದಿದ ದೇಶಗಳೂ ಮಾಡಲಾಗದ ಅಸಹಾಯಕತೆ ತೋರಿದವು ಎಂದು ಹೇಳಿದರು. ಭಾರತದ ಆಹಾರ ಪದ್ಧತಿ ಎಲ್ಲ ಕಾಯಿಲೆಗಳಿಗೆ ಪರಿಹಾರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಹಣ ಕೊಟ್ಟು ಜಂಕ್ ಫುಡ್ ಮೊರೆ ಹೋಗಿ ರೋಗ ಬರಿಸಿಕೊಳ್ಳುತ್ತಿದ್ದಾರೆ. ಗ್ರಾಮೀಣ ಜನರಿಗೆ ಇಂತಹ ಆರೋಗ್ಯ ಶಿಬಿರಗಳು ಉಪಯುಕ್ತವಾಗಿದ್ದು, ಕಟ್ಟ-ಕಡೆಯ ಜನರಿಗೂ ಸೇವೆ ಸಿಗಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಜನರು ನಾಲ್ಕನೇ ಅಲೆ ಬರುತ್ತಿದ್ದು ಅದನ್ನು ಎದುರಿಸಲು ಸಜ್ಜಾಗಬೇಕಿದೆ ಎಂದು ಹೇಳಿದರು.

ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಮಹಿಳೆಯರು ಆರೋಗ್ಯ ಕಾಳಜಿ ವಹಿಸಬೇಕು. ಕಾಲಕಾಲಕ್ಕೆ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ಕಾರದಿಂದ ಬಿಪಿಎಲ್ ಕಾರ್ಡ್‌ದಾರರಿಗೆ 3 ಲಕ್ಷದವರೆಗೆ ಉಚಿತ ಚಿಕಿತ್ಸೆ ಮತ್ತು ಎಪಿಎಲ್ ಕಾರ್ಡ್‌ದಾರರಿಗೆ 1.5 ಲಕ್ಷ ರೂಪಾಯಿ ಉಚಿತ ಚಿಕಿತ್ಸೆ ದೊರೆಯಲಿದ್ದು, ಇಂತಹ ಆರೋಗ್ಯ ಮೇಳಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಆರೋಗ್ಯ ಮೇಳದಲ್ಲಿ ಹೃದಯ ತಪಾಸಣೆ, ಮಧುಮೇಹ, ಕ್ಯಾನ್ಸರ್, ದಂತ ಚಿಕಿತ್ಸೆ, ಸ್ತ್ರೀರೋಗ, ಶಸ್ತ್ರಚಿಕಿತ್ಸೆ, ಕೀಲು ರೋಗ, ಚರ್ಮರೋಗ ಸೇರಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ತಜ್ಞ ವೈದ್ಯರು ತಪಾಸಣೆ ನಡೆಸಿದರು.

ವಿಧಾನಪರಿಷತ್ ಸದಸ್ಯ ಎಸ್.ರವಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಿ.ಎಲ್.ಪದ್ಮ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ತಾಲೂಕು ಆರೋಗ್ಯಾಧಿಕಾರಿ ಡಾ.ನಂದಿನಿ, ಜಿಪಂ ಮಾಜಿ ಅಧ್ಯಕ್ಷರಾದ ಇಕ್ಬಾಲ್ ಹುಸೇನ್ , ನಾಗರಾಜು, ಬಮುಲ್ ನಿರ್ದೇಶಕ ಎಚ್.ಎಸ್.ಹರೀಶ್ ಕುಮಾರ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಾಮಕೃಷ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net