ಹುಬ್ಬಳ್ಳಿ: ಧಾರವಾಡ ಜಿಲ್ಲಾ ದೇವಾಂಗ ಸಂಘ ಹಾಗೂ ಎಸ್ ಡಿಎಂ ನಾರಾಯಣ ಹಾರ್ಟ್ ಸೆಂಟರ್ ಇವುಗಳ ಸಂಯುಕ್ತಾಶ್ರಯದಲ್ಲಿ ಉಚಿತ ಹೃದಯ ತಪಾಸಣೆ ಶಿಬಿರವನ್ನು ಜೂ. 22ರಂದು ಬೆಳಗ್ಗೆ 9ಕ್ಕೆ ಧಾರವಾಡದ ಎಸ್ ಡಿಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ಕೆ.ಜಿ. ಬ್ಯಾಕೋಡಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಇರುವ ಸಮಾಜದ ಜನರು ಇದರಲ್ಲಿ ಭಾಗವಹಿಸುವರು. ಸುಮಾರು 300ಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ ಎಂದರು.
ಬೆಳಗ್ಗೆ 9ಕ್ಕೆ ಶಿಬಿರದ ಉದ್ಘಾಟನೆ ನಡೆಯಲಿದ್ದು, ಸಾನ್ನಿಧ್ಯವನ್ನು ಹಂಪಿ ಹೇಮಕೂಟ ಮಹಾಸಂಸ್ಥಾನ ಪೀಠಾಧ್ಯಕ್ಷ ದೇವಾಂಗ ಜಗದ್ಗುರು ಶ್ರೀ ದಯಾನಂದಪುರಿ ಮಹಾಸ್ವಾಮೀಜಿ ವಹಿಸುವರು ಎಂದರು.
ರಕ್ತದೊತ್ತಡ, ಮಧುಮೇಹ, ಇಸಿಜಿ, ಇಕೋ ಹಾಗೂ ಹಾರ್ಟ್ ಸ್ಕ್ಯಾನ್ ಮಾಡಲಾಗುವುದು. ತಜ್ಞ ವೈದ್ಯರಾದ ಡಾ. ವಿವೇಕಾನಂದ ಗಜಪತಿ, ಡಾ. ಮುರಳೀಧರ ನಾಯಕ, ಡಾ. ಶಶಿಕುಮಾರ ಪಟ್ಟಣಶೆಟ್ಟಿ, ಡಾ. ಕೀರ್ತಿ ಪಿ.ಎಲ್., ಡಾ. ಪ್ರಮೋದ ಹುನ್ನೂರ, ಡಾ. ಮಹಾಂತೇಶ ಉಳ್ಳಾಗಡ್ಡಿ ಅವರು ತಪಾಸಣೆ ನಡೆಸುವರು.
ಅಲ್ಲದೇ ಶಿಬಿರಾರ್ಥಿಗಳೊಂದಿಗೆ ಆರೋಗ್ಯ ಸಮಾಲೋಚನೆ ಮಾಡುವರು ಎಂದು ಹೇಳಿದರು.
ಉತ್ತರ ಕರ್ನಾಟಕದ ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ವಿಜಯನಗರ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ದೇವಾಂಗ ಸಮಾಜ ಬಾಂಧವರು ಹೃದಯ ಕಾಯಿಲೆಗೆ ಸಂಬಂಧಿಸಿ ತಪಾಸಣೆ ಮಾಡಿಸಿಕೊಳ್ಳಬಹುದು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಬೋರಣ್ಣವರ, ಕಾರ್ಯದರ್ಶಿ ನಾಗೇಶ ಬಾಫಿ, ಶಿವಶಂಕರ ಪಾತಾಳಿ, ರಮೇಶ ಕೂಡಲಗಿ, ರವೀಂದ್ರ ಪಾಟೀಲ ಇದ್ದರು.