

ಹುಬ್ಬಳ್ಳಿ : ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಹೋತನಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸೆ. 3 ರಂದು ಬೆಳಗಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಏರ್ಪಡಿಸಲಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಹಾಗೂ ಶ್ರೀಮತಿ ಗಂಗಮ್ಮ ಎಸ್. ಬೊಮ್ಮಾಯಿ ಟ್ರಸ್ಟ್, ಶಿಗ್ಗಾಂವಿಯ ಶ್ರೀ ಮೃತ್ಯುಂಜಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಹುಬ್ಬಳ್ಳಿಯ ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಹಾವೇರಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ.
ಹೋತನಹಳ್ಳಿಯ ಸಿಂದಗಿ ಮಠದ ಶ್ರೀ ಶಂಭುಲಿಂಗ ಪಟ್ಟಾಧ್ಯಕ್ಷರು ಸಾನ್ನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಕ್ಷಮತಾ ಸಾಂಚಾಲಕ ಗೋವಿಂದ ಜೋಶಿ, ಡಾ. ಕ್ರಾಂತಿಕಿರಣ, ಶಿಗ್ಗಾಂವ ತಾಲೂಕು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳುವರು.
ವಿವಿಧ ತಜ್ಞ ವೈದ್ಯರು ಪಾಲ್ಗೊಳ್ಳುವರು. ಈ ಶಿಬಿರದಲ್ಲಿ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಅರೋಗ್ಯ ಕರ್ನಾಟಕ ಕಾರ್ಡಿನ ಬಗ್ಗೆ ಮಾಹಿತಿ ನೀಡಿ ನೋಂದಣಿ ಮಾಡಿಕೊಳ್ಳಲಾಗುವುದು. ಕಾರ್ಡ್ ಮಾಡಿಸಿಕೊಳ್ಳಲು ಆಸಕ್ತರು ತಮ್ಮ ರೇಷನ್ ಕಾರ್ಡ್ ಹಾಗೂ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ತೆಗೆದುಕೊಂಡು ಬರುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.