

ಮಂಡ್ಯ: ಸಾಮಾಜಿಕ ಆರೋಗ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ನೂರಡಿ ರಸ್ತೆಯಲ್ಲಿರುವ ಡಿಆರ್‌ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಕರ್ತರಿಗೆ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯರು ರೋಗಿಯ ದೇಹದ ಕಾಯಿಲೆಗೆ ಚಿಕಿತ್ಸೆ ನೀಡಿದರೆ, ಪತ್ರಕರ್ತರು ಸಮಾಜದಲ್ಲಿರುವ ಕೊಳಕು, ರೋಗ-ರುಜಿನ ತೊಡೆದು ಹಾಕಲು ಶ್ರಮಿಸುತ್ತಾರೆ ಎಂದರು.
ಪತ್ರಿಕಾರಂಗ ಸಾಮಾಜಿಕ ನ್ಯಾಯ ನೀಡುವ ಕೈಂಕರ್ಯವಾಗಿದೆ. ಪೆನ್ನು ಮತ್ತು ಪೇಪರ್ ಇವುಗಳೊಂದಿಗೆ ಕರ್ತವ್ಯ ನಿರ್ವಹಿಸುವುದೇ ಜೀವನವಾಗಬಾರದು. ಸಾಮಾಜಿಕ ಹೊಣೆಗಾರಿಕೆ ಚಿಂತನೆಯ ಜತೆಗೆ ಆರೋಗ್ಯ ಕಾಪಾಡಿಕೊಳ್ಳುವ ಹೊಣೆಗಾರಿಕೆಯೂ ಮುಖ್ಯ. ಕೆಲಸದ ಒತ್ತಡ ನಿವಾರಿಸಲು ದಿನದ 24 ಗಂಟೆಯಲ್ಲಿ ಸ್ವಲ್ಪ ಸಮಯವನ್ನು ಮೀಸಲಿಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಕ್ಕೆ ಆಧಾರಸ್ತಂಭ ಪತ್ರಿಕಾರಂಗ. ಈ ರಂಗದಲ್ಲಿ ಕೆಲಸ ಮಾಡುವ ಜನರು ಆರೋಗ್ಯವಾಗಿದ್ದರೆ ಆರೋಗ್ಯಕರ ಚಿಂತನೆ ಮೂಡುತ್ತದೆ. ಆಗ ಉತ್ತಮ ಕೆಲಸವಾಗುತ್ತದೆ. ಇದರಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸಿರಬೇಕು. ಅದಕ್ಕಾಗಿ ಪತ್ರಕರ್ತರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆಗ ಮಾತ್ರ ಉತ್ತಮವಾಗಿ ಕೆಲಸ ನಿರ್ವಹಿಸಲು ಸಾಧ್ಯ ಎಂದರು.
ಡಿಆರ್‌ಎಂ ಆಸ್ಪತ್ರೆಯ ನಿರ್ದೇಶಕ ಪ್ರಕಾಶ್ ಮಾತನಾಡಿ, ಸಮಾಜದ ಅಭಿವೃದ್ಧಿಗೆ, ಆರೋಗ್ಯಕ್ಕೆ ಪತ್ರಕರ್ತರ ಆರೋಗ್ಯ ಮುಖ್ಯ. ಯುದ್ಧದಿಂದ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ ಎಂದರು.
ಡಿಆರ್‌ಎಂ ಆಸ್ಪತ್ರೆಯ ಮುಖ್ಯಸ್ಥ ಮಂಜುನಾಥ್ ಮಾತನಾಡಿ, ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕೆಲಸ ಮಾಡುವವರು ಎಂದರೆ ಪತ್ರಕರ್ತರು. ಆರೋಗ್ಯವೇ ಭಾಗ್ಯ ಎಂಬಂತೆ ಆರೋಗ್ಯ ಇದ್ದರೆ ಏನಾದರೂ ಮಾಡಬಹುದು. ಈ ನಿಟ್ಟಿನಲ್ಲಿ ಈ ಶಿಬಿರದ ಸದುಪಯೋಗಪಡೆದುಕೊಳ್ಳಿ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ, ಮಾಜಿ ಅಧ್ಯಕ್ಷ ನವೀನ್, ವೈದ್ಯರಾದ ಎಂ.ಪ್ರಶಾಂತ್, ಸುದರ್ಶನ್, ಡಿಆರ್‌ಎಂ ಆಸ್ಪತ್ರೆ ಆಡಳಿತಾಧಿಕಾರಿ ಲಾವಣ್ಯ, ವ್ಯವಸ್ಥಾಪಕ ಎಂ.ಹರೀಶ್, ಪಿಆರ್‌ಒ ಶಂಕರ್ ಹಾಜರಿದ್ದರು.
ಇದೇ ವೇಳೆ ಪತ್ರಕರ್ತರಿಗೆ ಮಧುಮೇಹ ತಪಾಸಣೆ, ಹೃದಯಕ್ಕೆ ಸಂಬಂಧಿಸಿದಂತೆ ಇಸಿಜಿ, ಎಕೋ, ರಕ್ತಪರೀಕ್ಷೆ, ರಕ್ತದೊತ್ತಡ ಪರೀಕ್ಷೆಯ ಜತೆಗೆ ವೈದ್ಯರ ಉಚಿತ ಸಲಹೆ ನೀಡಲಾಯಿತು.